ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ನಟಿಸಿರುವ ಐತಿಹಾಸಿಕ ಚಿತ್ರ ‘ಪೃಥ್ವಿರಾಜ್’ ಜೂನ್ 10ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.
ಪೃಥ್ವಿರಾಜ್ ಚೌಹಾಣ್ ಅವರ ಜೀವನವನ್ನು ಆಧರಿಸಿದ ಈ ಚಲನಚಿತ್ರ ಈ ಹಿಂದೆ ಜನವರಿ 21ರಂದು ತೆರೆಗೆ ಬರಲು ಸಿದ್ಧವಾಗಿತ್ತು. ಆದರೆ ಕೋವಿಡ್-19 ಪ್ರಕರಣಗಳ ಹೆಚ್ಚಳದಿಂದಾಗಿ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು.
ಯಶ್ ರಾಜ್ ಫಿಲ್ಸ್ಮ ನಿರ್ಮಾಣದ ಸಿನಿಮಾದ ಬಿಡುಗಡೆ ದಿನಾಂಕವನ್ನು ಅಕ್ಷಯ್ ಕುಮಾರ್ ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ. ‘ಗ್ರ್ಯಾಂಡ್ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರ ಐತಿಹಾಸಿಕ ಪ್ರಯಾಣವು ಜೂನ್ 10ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ದೊಡ್ಡ ಪರದೆಯ ಮೇಲೆ ಶುರುವಾಗಲಿದೆ” ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಈ ಚಿತ್ರದ ಟ್ರೇಲರ್ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಚಂದ್ರಪ್ರಕಾಶ್ ದ್ವಿವೇದಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಂಜಯ್ ದತ್, ಸೋನು ಸೂದ್ ನಟಿಸಿದ್ದಾರೆ. ಮಿಸ್ ವರ್ಲ್ಡ್ 2017ರ ಮಾನುಷಿ ಛಿಲ್ಲರ್ ಅವರು ಸಂಯೋಗಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರ ಈಗಾಗಲೇ ವಿವಾದಕ್ಕೆ ಕೂಡಾ ಸಿಲುಕಿದೆ. ಈ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಾಜಸ್ಥಾನದ ಗುರ್ಜರ್ ಸಮುದಾಯದ ಜನರು ಆರೋಪಿಸಿದ್ದಾರೆ.
ಸಿನಿಮಾವನ್ನು ವಿರೋಧಿಸಿರುವ ರಾಜಸ್ಥಾನದ ಗುರ್ಜರ್ ಸಮಾಜದ ಜನರು ಸಿನಿಮಾದ ಪ್ರದರ್ಶನವನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಪೃಥ್ವಿರಾಜ್ ಗುರ್ಜರ್ ನ್ನು ಸಿನಿಮಾದಲ್ಲಿ ರಜಪೂತ ಎಂದು ತೋರಿಸಲಾಗುತ್ತಿದೆ ಎಂದು ಗುರ್ಜರ್ ಸಮಾಜ ಆರೋಪಿಸಿದೆ. ಇದೇ ವೇಳೆ ರಜಪೂತ ಸಮಾಜದ ಜನರು ಗುರ್ಜರ್ ಸಮಾಜದ ಈ ಹಕ್ಕನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಪೃಥ್ವಿರಾಜ್ ಚೌಹಾಣ್ ಅವರಿಗೆ ‘ರಜಪೂತ್’ ಎನ್ನುವ ಸರ್ನೆಮ್ ಬಳಸಿದರೆ, ಸಿನಿಮಾವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಗುರ್ಜರ್ ಸಮಾಜ ಹೇಳಿದೆ.
ಇದೇ ವೇಳೆ ಶ್ರೀ ರಜಪೂತ ಕರ್ಣಿ ಸೇನೆಯ ರಾಷ್ಟ್ರೀಯ ವಕ್ತಾರ ವಿಜೇಂದರ್ ಸಿಂಗ್ ಸಕ್ತಾವತ್ ಅವರು, ಆರಂಭದಲ್ಲಿ ಗುರ್ಜರ್ಗಳು ಗೌಚರ್ಗಳಾಗಿದ್ದರು. ನಂತರ ಅದು ಗುಜ್ಜರ್, ಗುರ್ಜರ್ಗಳಾಗಿ ಮಾರ್ಪಟ್ಟಿದೆ ಮತ್ತು ಅವರು ಮೂಲತಃ ಗುಜರಾತಿನವರು ಮತ್ತು ಆದ್ದರಿಂದ ಗುರ್ಜರ್ಸ್ ಎಂದು ಕರೆಯುತ್ತಾರೆ. ಗುರ್ಜರ್ ಎಂಬ ಪದವು ಸ್ಥಳಕ್ಕೆ ಸಂಬಂಧಿಸಿದೆ ಹೊರತು, ಯಾವುದೇ ಜಾತಿಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಚಿತ್ರದ ಬಿಡುಗಡೆ ಸುಸೂತ್ರವಾಗಿ ನಡೆಯುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
____
Be the first to comment