ಚಂದನವನದಲ್ಲಿ ಚಟುವಟಿಕೆಗಳು ಜೋರಾಗಿಯೇ ಸದ್ದು ಮಾಡ್ತಿದೆ. ಆ ನಿಟ್ಟಿನಲ್ಲಿ ಶ್ರೀನಗರ ಕಿಟ್ಟಿ, ಪಾವನಾಗೌಡ ಅಭಿನಯದ ಗೌಳಿ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಸ್ನೇಹಿತನ ಚಿತ್ರಕ್ಕೆ ಶುಭ ಹಾರೈಸಲು ಗೋಲ್ಡನ್ಸ್ಟಾರ್ ಗಣೇಶ್, ದುನಿಯಾ ವಿಜಯ್, ನೆನಪಿರಲಿ ಪ್ರೇಮ್, ಪ್ರಜ್ವಲ್ ದೇವರಾಜ್ ಇವರೆಲ್ಲ ಒಂದೇ ವೇದಿಕೆ ಹಂಚಿಕೊಂಡ ಅಪರೂಪದ ಕ್ಷಣ ಅದಾಗಿತ್ತು. ಮೊದಲಬಾರಿಗೆ ಸೂರ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ರಘು ಸಿಂಗಂ ನಿರ್ಮಿಸುತ್ತಿದ್ದಾರೆ.
ಗೌಳಿ ಚಿತ್ರದ ನಾಯಕನ ರೌದ್ರಾವತಾರದ ಝಲಕ್ ಹೇಗಿರುತ್ತೆ ಎಂದು ಚಿತ್ರತಂಡ ಟೀಸರ್ ಮೂಲಕ ಕನ್ನಡ ಪ್ರೇಕ್ಷಕರಿಗೆ ತೋರಿಸಿಕೊಟ್ಟಿದೆ. ಫೋಟೋಗ್ರಾಫರ್, ಸಹನಿರ್ದೇಶಕರೂ ಆಗಿದ್ದ ಶೂರ ಇದೇ ಮೊದಲಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ.
ಗೌಳಿಗರು ಮೂಲತ: ಮರಾಠಿಗರು, ಮಹಾರಾಷ್ಟ್ರದಿಂದ ಇಲ್ಲಿಗೆ ಬಂದು ನೆಲಸಿದವರು. ಇದೊಂದು ನೈಜಘಟನೆ ಆಧರಿಸಿದ ಚಿತ್ರ, ಈ ಘಟನೆ ನಡೆದಿರುವುದು ಬೇರೆಕಡೆ, ಅದನ್ನು ಇಲ್ಲಿ ನಡೆದಂತೆ ತೋರಿಸಿದ್ದೇವೆ, ಈ ಕಥೆ ಮಾಡಿಕೊಂಡಾಗ ಗೌಳಿಯ ಪಾತ್ರವನ್ನು ಕಿಟ್ಟಿ ಅವರಿಂದಲೇ ಮಾಡಿಸಬೇಕೆಂದುಕೊಂಡಿದ್ದೆ. ಕಥೆ, ಪಾತ್ರ ಕೇಳಿದಕೂಡಲೇ ಅವರೂ ಒಪ್ಪಿದರು.
ನಂತರ ನಾಯಕಿಯಾಗಿ ಪಾವನಾಗೌಡ, ರಂಗಾಯಣರಘು, ಶರತ್ ಲೋಹಿತಾಶ್ವ, ಯiಶ್ಶೆಟ್ಟಿ ಇವರೆಲ್ಲರೂ ಬಂದು ಗೌಳಿಯ ಪಿಲ್ಲರ್ಗಳಾಗಿ ಜೀವ ತುಂಬಿದ್ದಾರೆ. ಬಾಲನಟಿ ನಮನ ಕಿಟ್ಟಿ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ, ಯಲ್ಲಾಪುರ, ಮುಂಡ್ಗೋಡ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಮೊದಲಹಂತದ ಶೂಟಿಂಗ್ ನಡೆಸಿದ್ದೇವೆ.
ಅಲ್ಲದೆ ಬೆಂಗಳೂರು ಸುತ್ತಮುತ್ತ ಮತ್ತಷ್ಟು ಅಕ್ಷನ್ ಸೀನ್ಗಳನ್ನು ಚಿತ್ರೀಕರಿಸಲಾಗಿದ್ದು, ಕೊನೇಹಂತದ ಇಪ್ಪತ್ತು ದಿನಗಳ ಚಿತ್ರೀಕರಣ ಮಾತ್ರವೇ ಬಾಕಿ ಉಳಿದಿದೆ. ಈ ಟೀಸರ್ ಬರೀಸ್ಯಾಂಪಲ್ ಅಷ್ಟೇ, ಚಿತ್ರದಲ್ಲಿ ಸಾಕಷ್ಟು ವಿಶೇಷಗಳಿವೆ ಎಂದು ಹೇಳಿದರು.
ಶ್ರೀನಗರಕಿಟ್ಟಿ ಅವರು ಗೌಳಿಯಾಗಿ ಇಡೀ ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಘರ್ಜಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಲ್ಲಿರುವ ಪ್ರತಿಯೊಂದು ಶಾಟ್ ನಮ್ಮ ನಿರ್ದೇಶಕರ ಕನಸು. ಶರತ್ ಲೋಹಿತಾಶ್ವ, ರಂಗಾಯಣ ರಘು ಹೀಗೆ ಎಲ್ಲರೂ ಚಿತ್ರಕ್ಕೆ ಜೀವ ತುಂಬಿದ್ದಾರೆ. ಇಲ್ಲಿ ನೀವೆಲ್ಲ ನೋಡಿದ ಭರ್ಜರಿಸೀನ್, ಸೌಂಡ್ ಎಫೆಕ್ಟ್ ಗೆ ಛಾಯಾಗ್ರಾಹಕ ಸಂದೀಪ್, ಸಂಗೀತ ನಿರ್ದೇಶಕ ಶಶಾಂಕ್ ಶೇಷಗಿರಿ ಕಾರಣರು. ಇದರ ನೂರರಷ್ಟು ಎಫೆಕ್ಟ್ ಚಿತ್ರದಲ್ಲಿರುತ್ತದೆ ಎಂದು ಹೇಳಿದರು.
ನಟ ಗಣೇಶ್ ಮಾತನಾಡಿ ಕಿಟ್ಟಿಯ ಈ ಶ್ರಮ ನೂರಕ್ಕೆ ನೂರರಷ್ಟು ಫಲ ಕೊಡುತ್ತದೆ. ನೇಟಿವಿಟಿಯನ್ನು ಚೆನ್ನಾಗಿ ತೋರಿಸಿದ್ದಾರೆ ಎಂದು ಮೆಚ್ಚಿಕೊಂಡರು. ನಂತರ ದುನಿಯಾ ವಿಜಯ್ ಮಾತನಾಡಿ ನಮ್ಮ ಟೀಮ್ಗೆ ಕಿಟ್ಟಿ ಕ್ಯಾಪ್ಟನ್ ಥರ, ಗಿರಿ ಚಿತ್ರದ ಸಮಯದಲ್ಲಿ ನನಗೆ ಒಂದು ಪಾತ್ರ ಕೊಡಿಸಿದ್ದ, ಕಿಟ್ಟಿಗೆ ಈ ಥರದ ಪಾತ್ರ ಬಹಳ ಮೊದಲೇ ಸಿಗಬೇಕಿತ್ತು.
ಬೇರೆ ಭಾಷೆಯ ಸಿನಿಮಾಗಳನ್ನು ಮೀರಿಸುವಂತಿದೆ ಈ ಟೀಸರ್ ಎಂದು ಹೊಗಳಿದರು, ನಟ ಪ್ರೇಮ್ ಮಾತನಾಡಿ ಒಬ್ಬ ಸ್ನೇಹಿತನಿಗಾಗಿ ನಾವೆಲ್ಲ ಇಲ್ಲಿಗೆ ಬಂದಿದ್ದೇವೆ. ಇಲ್ಲಿ ಕಿಟ್ಟಿ ಟರ್ರರ್ ಆಗಿ ಕಾಣಿಸುತ್ತಾರೆ. ನಿಮ್ಮೆಲ್ಲರ ಶ್ರಮ ಈ ಟೀಸರ್ನಲ್ಲೇ ಕಾಣಿಸುತ್ತದೆ. ಇದು ಲೆಜೆಂಡರಿ ಹಿಟ್ ಆಗಲಿ ಎಂದು ಶುಭ ಹಾರೈಸಿದರು.
ಈ ಚಿತ್ರವನ್ನು ಸೋಹನ್ ಫಿಲಂ ಫ್ಯಾಕ್ಟರಿ ಮೂಲಕ ರಘುಸಿಂಗಂ ಅವರು ನಿರ್ಮಾಣ ಮಾಡುತ್ತಿದ್ದಾರೆ. ನಾಯಕಿಯಾಗಿ ಪಾವನಾಗೌಡ ಕಾಣಿಸಿಕೊಂಡಿದ್ದು, ಇದೇ ಮೊದಲಬಾರಿಗೆ ಗ್ರಾಮೀಣ ಮಹಿಳೆಯಾಗಿ ನಟಿಸಿದ್ದಾರೆ. ಹಿರಿಯನಟ ರಂಗಾಯಣ ರಘು, ಶರತ್ ಲೋಹಿತಾಶ್ವ ಅವರಿಗೆ ಚಿತ್ರದಲ್ಲಿ ವಿಶೇಷವಾದ ಪಾತ್ರಗಳಿವೆ.
Be the first to comment