ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಕಾಣಿಸಿಕೊಂಡಿದ್ದ ಅಯೋಗ್ಯ ಚಿತ್ರದ “ಏನಮ್ಮಿ ಏನಮ್ಮಿ” ಹಾಡು 100 ಮಿಲಿಯನ್ ವ್ಯೂ ಪಡೆಯುವಲ್ಲಿ ಯಶಸ್ವಿಯಾಗಿದೆ.
ಚಿತ್ರ ರಿಲೀಸ್ ಆದ ನಾಲ್ಕು ವರ್ಷಗಳ ಬಳಿಕ ಈ ದಾಖಲೆ ಉಂಟಾಗಿದೆ. ಮಹೇಶ್ ಕುಮಾರ್ ನಿರ್ದೇಶನದ ಮೊದಲ ಚಿತ್ರವಾದ ಅಯೋಗ್ಯದ ಹಾಡುಗಳು ಹಿಟ್ ಆಗುವ ಜೊತೆಗೆ ಚಿತ್ರ ಬಾಕ್ಸಾಫೀಸ್ ನಲ್ಲಿ ಗೆದ್ದಿತ್ತು.
ಏನಮ್ಮಿ ಏನಮ್ಮಿ ಹಾಡನ್ನು ಕಡಿಮೆ ಬಜೆಟಿನಲ್ಲಿ ಎರಡು ದಿನಗಳಲ್ಲಿ ಗ್ರಾಮೀಣ ಸೊಗಡಿನಲ್ಲಿ ಚಿತ್ರೀಕರಿಸಲಾಗಿತ್ತು. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದ ಈ ಹಾಡು ಚಿತ್ರ ಬಿಡುಗಡೆ ಮುನ್ನವೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತ್ತು.
ಏನಮ್ಮಿ ಏನಮ್ಮಿ ಹಾಡು ಯೂಟ್ಯೂಬ್ ನಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದ ಕನ್ನಡದ ನಾಲ್ಕನೇ ಹಾಡು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮುನ್ನ ಶರಣ್ ಅಭಿನಯದ ರಾಂಬೋ ಸಿನಿಮಾದ ಚುಟು ಚುಟು ಸಾಂಗ್ ಈ ಸಾಧನೆಯನ್ನು ಮಾಡಿತ್ತು. ಈಗ ಈ ಹಾಡು 150 ಮಿಲಿಯನ್ ವೀಕ್ಷಣೆ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಧ್ರುವ ಸರ್ಜಾ ನಾಯಕತ್ವದ ಪೊಗರು ಸಿನಿಮಾದ ಕರಾಬು ಹಾಡು 279 ಮಿಲಿಯನ್ ವೀಕ್ಷಣೆ ಪಡೆದಿತ್ತು. ದರ್ಶನ್ ನಾಯಕ ನಟನಾಗಿ ನಟಿಸಿದ್ದ ರಾಬರ್ಟ್ ಸಿನಿಮಾದ ಕಣ್ಣೇ ಹೊಡೆಯಾಕ್ ಹಾಡು 112 ಮಿಲಿಯನ್ ವೀಕ್ಷಣೆಯನ್ನು ಪಡೆದಿತ್ತು.
ಏನಮ್ಮಿ ಏನಮ್ಮಿ ಕಾಡಿಗೆ ಮೋಹನ್ ಅವರು ಕೊರಿಯೋಗ್ರಫಿ ಮಾಡಿದ್ದರು. ಈ ಹಾಡನ್ನು ಮಂಡ್ಯದ ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಹಿನ್ನೆಲೆಯ ಜೊತೆಗೆ ಚಿತ್ರೀಕರಣ ಮಾಡಲಾಗಿತ್ತು. ಪಾಂಡವಪುರ, ಕರಿಗುಡ್ಡ ಸೇರಿದಂತೆ ಕೆಲ ಗ್ರಾಮೀಣ ಪ್ರದೇಶದಲ್ಲಿ ಈ ಹಾಡಿಗೆ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಹೆಜ್ಜೆ ಹಾಕಿದ್ದರು.
ಈ ಹಾಡನ್ನು ವಿಜಯಪ್ರಕಾಶ್ ಹಾಗೂ ಪಾಲಕ್ ಮುಚ್ಚಲ್ ಹಾಡಿದ್ದಾರೆ. ಆನಂದ್ ಆಡಿಯೋ ಚಾನಲ್ ನಲ್ಲಿ ಈ ಹಾಡನ್ನು ಅಪ್ಲೋಡ್ ಮಾಡಲಾಗಿದೆ.
_______
Be the first to comment