ಭಾರತೀಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಟ್ವೀಟ್ ಒಂದಕ್ಕೆ ಕೆಟ್ಟದಾಗಿ ಪ್ರತಿಕ್ರಿಯಿಸಿದ ನಟ ಸಿದ್ಧಾರ್ಥ್ ತಮ್ಮ ನಡೆಗೆ ಕ್ಷಮೆ ಕೋರಿದ ಹೊರತಾಗಿಯೂ ಎಲ್ಲೆಡೆಯಿಂದ ವ್ಯಾಪಕ ಟೀಕೆ ಎದುರಿಸುತ್ತಿದ್ದಾರೆ.
ಪ್ರಕರಣದ ಬಗ್ಗೆ ಸೈನಾ ನೆಹ್ವಾಲ್ ತಂದೆ ಹರ್ವೀರ್ ಸಿಂಗ್ ನೆಹ್ವಾಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ‘ಸೈನಾ ದೇಶಕ್ಕೆ ಪದಕಗಳನ್ನು ಗೆದ್ದುಕೊಟ್ಟಿದ್ದಾಳೆ. ಆ ನಟ ದೇಶಕ್ಕೆ ಏನು ಮಾಡಿದ್ದಾರೆ? ಎಂದು ಅವರು ಪ್ರಶ್ನಿಸಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು ”ನನ್ನ ಮಗಳ ಕುರಿತಾಗಿ ಅಂಥ ಮಾತುಗಳನ್ನು ಕೇಳಿದಾಗ ಬಹಳ ಖೇದವಾಯಿತು. ಆಕೆ ದೇಶದ ಪರ ಆಟವಾಡಿ ಪದಕಗಳನ್ನು ಗೆದ್ದಿದ್ದಾಳೆ. ದೇಶದ ಹೆಮ್ಮೆ ಹೆಚ್ಚಿಸಿದ್ದಾಳೆ. ಸಿದ್ಧಾರ್ಥ್ ಅವರು ದೇಶಕ್ಕಾಗಿ ಏನು ಮಾಡಿದ್ದಾರೆ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗ ಸಿದ್ಧಾರ್ಥ್ ಹೇಳಿಕೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಹಾರಾಷ್ಟ್ರ ಡಿಜಿಪಿಗೆ ನಟನ ವಿರುದ್ಧ ಪ್ರಕರಣ ದಾಖಲಿಸುವಂತೆ ಪತ್ರ ಬರೆದಿದೆ. ಇದಕ್ಕೆ ಸೈನಾ ನೆಹ್ವಾಲ್ ತಂದೆ ಹರ್ಷ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ”ಸೈನಾ ದೇಶದ ಹೆಮ್ಮೆಯ ಪ್ರತಿಭೆ. ಅವರ ವಿರುದ್ಧ ಕೀಳು ರೀತಿಯ ಹೇಳಿಕೆ ನೀಡುವುದು ಕೆಟ್ಟ ಮನಸ್ಥತಿ ತೋರಿಸುತ್ತದೆ” ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಪಂಜಾಬ್ನಲ್ಲಿ ಉಂಟಾದ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಲೋಪ ಪ್ರಕರಣದ ಕುರಿತಂತೆ ಸೈನಾ ಳವಳ ವ್ಯಕ್ತಪಡಿಸಿದ್ದರು.
ಇದಕ್ಕೆ ಸಿದ್ಧಾರ್ಥ್ ಪ್ರತಿಕ್ರಿಯಿಸಿ, ” ನವಿರಾದ ಕಾಕ್ ವಿಶ್ವ ಚಾಂಪಿಯನ್, ಭಾರತವು ರಕ್ಷಕರನ್ನು ಹೊಂದಿರುವುದಕ್ಕೆ ದೇವರಿಗೆ ಧನ್ಯವಾದಗಳು. ಶೇಮ್ ಆನ್ ಯೂ ರಿಹಾನ್ನಾ” ಎಂದಿದ್ದರು. ಅವರು ಬಳಸಿದ ಆಕ್ಷೇಪಾರ್ಹ ಪದಗಳಿಗೆ ವಿರೋಧ ವ್ಯಕ್ತವಾಗಿತ್ತು.
ಬಳಿಕ ಸಿದ್ಧಾರ್ಥ್ ಸಮರ್ಥನೆ ನೀಡುತ್ತಾ, ತಾವು ‘ಕಾಕ್ ಮತ್ತು ಬುಲ್’ ಈ ಅರ್ಥದಲ್ಲಿ ಪದ ಬಳಿಸಿದ್ದೆ. ಅದನ್ನು ಬೇರೆ ರೀತಿ ಓದುವುದು ಸರಿಯಲ್ಲ ಎಂದಿದ್ದರು.
ಈ ವೇಳೆ ಸಿದ್ಧಾರ್ಥ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸೈನಾ, ”ನಾನು ನಟನೆಯಲ್ಲಿ ಸಿದ್ಧಾರ್ಥ್ರಂತೆ ಆಗಬೇಕು ಎಂದು ಕನಸು ಕಂಡಿದ್ದೆ. ಆದರೆ ಈ ಹೇಳಿಕೆ ಸರಿಯಲ್ಲ. ಅವರು ಉತ್ತಮ ಪದಗಳ ಮೂಲಕ ಪ್ರತಿಕ್ರಿಯಿಸಬಹುದಿತ್ತು” ಎಂದಿದ್ದರು.
ದಕ್ಷಿಣ ಭಾರತದ ನಟ ಸಿದ್ಧಾರ್ಥ್ ‘ರಂಗ್ ದೇ ಬಸಂತಿ’ ಚಿತ್ರದ ಮೂಲಕ ಹೆಸರು ಮಾಡಿದ್ದರು.
___
Be the first to comment