2021ರ ಯಶಸ್ವಿ ಚಿತ್ರ ಎಸಿಕೊಂಡಿರುವ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ವಿಶ್ವದಾದ್ಯಂತ ಇದುವರೆಗೆ 326 ಕೋಟಿ ರೂಪಾಯಿಯನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸುಕುಮಾರ್ ನಿರ್ದೇಶನದ ಪುಷ್ಪ: ದಿ ರೈಸ್ ಸಿನಿಮಾ ಡಿ. 17 ರಂದು ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್ ಬಿಜ್ ಪ್ರಕಾರ, 23 ನೇ ದಿನದ ಅಂತ್ಯಕ್ಕೆ 176 ಕೋಟಿ ರೂಪಾಯಿ ಗಳಿಸುವ ಮೂಲಕ ವಿಶ್ವದಾದ್ಯಂತ ಪುಷ್ಪ ಈವರೆಗೆ 326 ಕೋಟಿ ರೂಪಾಯಿಯನ್ನು ಬಾಚಿಕೊಂಡಿದೆ. ಈ ಪೈಕಿ ಭಾರತದಲ್ಲಿ 250.3 ಕೋಟಿ ರೂಪಾಯಿ ಗಳಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ.
ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಶೇ. 50 ರ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಈ ಮಧ್ಯೆಯೂ ಪುಷ್ಪ ಸಿನಿಮಾದ ಓಟಕ್ಕೆ ಬ್ರೇಕ್ ಬಿದ್ದಿಲ್ಲ. ಈ ಚಿತ್ರವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 25 ದಿನ ಪೂರೈಸಿದೆ.
ಪುಷ್ಪ ಸಿನಿಮಾವು ಆಂಧ್ರಪ್ರದೇಶಲ್ಲಿ ನಡೆಯುವ ರಕ್ತ ಚಂದನ ಕಳ್ಳಸಾಗಣೆದಾರರ ಜೀವನವನ್ನು ಆಧರಿಸಿದೆ. ಕಳ್ಳ ಸಾಗಣೆ ಮಾಡುವ ಡ್ರೈವರ್ ಪುಷ್ಪ ರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ನಟಿಸಿದ್ದಾರೆ. ಭನ್ವರ್ ಸಿಂಗ್ ಶೇಖಾವತ್ ಆಗಿ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದಾರೆ. ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಸುನೀಲ್, ಧನಂಜಯ, ರಾವ್ ರಮೇಶ್, ಅನಸೂಯ ಭಾರಧ್ವಾಜ್ ಮತ್ತು ಅಜಯ್ ಘೋಷ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹೀಗಿದ್ದರೂ ಪುಷ್ಪ ಸಿನಿಮಾದ ಅಬ್ಬರ ಚಿತ್ರಮಂದಿರಗಳಲ್ಲಿ ಕಡಿಮೆಯಾಗಿಲ್ಲ. ಈ ಸಿನಿಮಾದ ಹಿಂದಿ ಅವತರಣಿಕೆಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸುಕುಮಾರ್ ನಿರ್ದೇಶನದ ಈ ಚಿತ್ರ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಚಿತ್ರದ ಎರಡನೇ ಭಾಗ ಇನ್ನಷ್ಟೇ ಬರಬೇಕಿದೆ. ಫೆಬ್ರವರಿ ತಿಂಗಳಿನಲ್ಲಿ ಎರಡನೇ ಭಾಗದ ಶೂಟಿಂಗ್ ಮಾಡಲು ನಿರ್ದೇಶಕರು ನಿರ್ಧರಿಸಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಚಿತ್ರ ತೆರೆಯ ಮೇಲೆ ಬರುವ ಯೋಜನೆ ರೂಪಿಸಲಾಗಿದೆ.
_____
Be the first to comment