ಡಾರ್ಲಿಂಗ್ ಕೃಷ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಲಕ್ಕಿ ಮ್ಯಾನ್’ ಚಿತ್ರಕ್ಕೆ ಪುನೀತ್ ರಾಜ್‌ಕುಮಾರ್ ಅವರಿಗೆ ಮಿಮಿಕ್ರಿ ಕಲಾವಿದ ಗೋಪಿ ಅವರಿಂದ ಧ್ವನಿ ನೀಡಿಸಲು ಚಿತ್ರತಂಡ ಮುಂದಾಗಿದೆ.
”ಚಿತ್ರೀಕರಣದ ವೇಳೆ ರೆಕಾರ್ಡ್ ಮಾಡಿಕೊಂಡ ಧ್ವನಿಯನ್ನೇ ಬಹುಪಾಲು ಉಳಿಸಿಕೊಳ್ಳಲಾಗುತ್ತದೆ. ಚೆನ್ನಾಗಿ ಇರದ ಭಾಗಗಳನ್ನು ಕತ್ತರಿಸಿ ಅಲ್ಲಿ ಮಿಮಿಕ್ರಿ ಕಲಾವಿದ ಗೋಪಿ ಅವರಿಂದ ಪುನೀತ್ ಧ್ವನಿಯಲ್ಲಿ ಡಬ್ಬಿಂಗ್ ಮಾಡಿಸಲಾಗುವುದು’ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.
‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರು ದೇವರ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣವಾಗಿದ್ದು ಡಬ್ಬಿಂಗ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
ಪುನೀತ್ ನಟನೆಯ ಕೊನೆಯ ಚಿತ್ರ ‘ಜೇಮ್ಸ್’ ಪುನೀತ್ ಅವರ ಜನ್ಮ ದಿನವಾದ ಮಾರ್ಚ್ 17 ರಂದು ಬಿಡುಗಡೆ ಆಗದೆ ಹೋದರೆ ‘ಲಕ್ಕಿ ಮ್ಯಾನ್’ ಸಿನಿಮಾವನ್ನು ಅಂದು ಬಿಡುಗಡೆ ಮಾಡಲು ಡಾರ್ಲಿಂಗ್ ಕೃಷ್ಣ ತಂಡ ಯೋಜನೆ ಹಾಕಿಕೊಂಡಿದೆ.
ಪರ್ಸಾ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಆಗುತ್ತಿರುವ ಈ ಚಿತ್ರ ಡಾರ್ಲಿಂಗ್ ಕೃಷ್ಣ ವೃತ್ತಿ ಬದುಕಿನ ಪ್ರಮುಖ ಚಿತ್ರ ಎನ್ನಲಾಗಿದೆ. ಈ ಚಿತ್ರದ ಕಥಾ ಹಂದರ ವಿಭಿನ್ನವಾಗಿದೆ. ಕೃಷ್ಣ ಈ ಬಾರಿ ತೆರೆಯ ಮೇಲೆ ಹೇಗೆ ಮೋಡಿ ಮಾಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
‘ಲಕ್ಕಿ ಮ್ಯಾನ್’ ಚಿತ್ರವನ್ನು ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಅವರು ನಿರ್ದೇಶನ ಮಾಡಿದ್ದಾರೆ. ಇದು ತಮಿಳಿನ ‘ಒ ಮೈ ಕಡವಳೆ’ ಚಿತ್ರದ ರಿಮೇಕ್ ಆಗಿದೆ. ತಮಿಳಿನಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಮಾಡಿದ್ದಾರೆ. ಪುನೀತ್ ಅವರು ನಾಯಕ ನಟನಿಗೆ ದಾರಿ ತೋರಿಸುವ ‘ದೇವರ’ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಪುನೀತ್ ರಾಜ್‌ಕುಮಾರ್ ಹಾಗೂ ಬಹುಭಾಷಾ ನಟ ಪ್ರಭುದೇವ ಅವರು ಡಾ. ರಾಜ್‌ಕುಮಾರ್ ಕುರಿತು ರಚಿಸಲಾದ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದಾರೆ ಎನ್ನುವುದು ವಿಶೇಷ ಆಗಿದೆ. ಇದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಲಕ್ಕಿ ಮ್ಯಾನ್’ ಚಿತ್ರದಲ್ಲಿ ನಾಯಕಿಯಾಗಿ ಸಂಗೀತಾ ಶೃಂಗೇರಿ ಕಾಣಿಸಿಕೊಂಡಿದ್ದಾರೆ. ರೋಶಿನಿ ಪ್ರಕಾಶ್, ಆರ್ಯ, ರಂಗಾಯಣ ರಘು, ಸಾಧು ಕೋಕಿಲ, ನಾಗಭೂಷಣ್, ಸುಂದರ್ ರಾಜ್, ಸುಧಾ ಬೆಳವಾಡಿ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.
___
Be the first to comment