ಚಿತ್ರ ರಿಲೀಸ್ ಗೆ ಕನ್ನಡ ನಿರ್ಮಾಪಕರು ಹಿಂದೇಟು

ರಾಜ್ಯದಲ್ಲಿ ನೈಟ್‌ ಕರ್ಫ್ಯೂ, ವೀಕೆಂಡ್‌ ಕರ್ಫ್ಯೂ, ಶೇ.50 ಸೀಟು ಸಾಮರ್ಥ್ಯದಲ್ಲಿ ಚಿತ್ರ ಪ್ರದರ್ಶನ ನಿಯಮ ಜಾರಿಗೆ ಬಂದ ಬಳಿಕ ಕನ್ನಡ ಚಿತ್ರಗಳನ್ನು ರಿಲೀಸ್ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ.

ಜೋಗಿ ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಚಿತ್ರ ಜನವರಿ 21ಕ್ಕೆ ರಿಲೀಸ್ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಈ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಿರುವುದಾಗಿ ಪ್ರೇಮ್ ಘೋಷಣೆ ಮಾಡಿದ್ದಾರೆ. ಅನಿಶ್ಚಿತತೆಯ ವಾತಾವರಣ ಇರುವ ಕಾರಣ ಹಲವು ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳನ್ನು ರಿಲೀಸ್ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಸುದೀಪ್‌ ನಟನೆಯ ಪ್ಯಾನ್‌ ಇಂಡಿಯಾ ಚಿತ್ರ ‘ವಿಕ್ರಾಂತ್‌ ರೋಣ’ ಫೆಬ್ರವರಿ 24ರಂದು ತೆರೆಗೆ ಬರಲು ಸಿದ್ಧತೆ ನಡೆಸಿತ್ತು. ಫೆ.11ಕ್ಕೆ ಡಾರ್ಲಿಂಗ್‌ ಕೃಷ್ಣ ಅಭಿನಯದ ‘ಲವ್‌ ಮಾಕ್ಟೇಲ್‌ 2’ ತೆರೆಗೆ ಬರಬೇಕಿತ್ತು. ಶ್ರೀನಿ ನಟನೆ- ನಿರ್ದೇಶನದ ‘ಓಲ್ಡ್‌ ಮಾಂಕ್‌’, ಶರಣ್‌ ನಟನೆಯ ‘ಅವತಾರ ಪುರುಷ’ ಸೇರಿದಂತೆ ಹಲವು ಚಿತ್ರಗಳು ರಿಲೀಸ್ ಆಗಲು ಯೋಜನೆ ರೂಪಿಸಿದ್ದವು. ಆದರೆ ಈಗ ಈ ಸಿನಿಮಾಗಳು ಸದ್ಯ ಬಿಡುಗಡೆಯಾಗುವುದು ಅನುಮಾನವಾಗಿದೆ.

ಚಿತ್ರಮಂದಿರದಲ್ಲಿ ಶೇ.50 ಸೀಟು ಭರ್ತಿ ಆದೇಶ ಬಂದಿರುವುದರಿಂದ ಚಿತ್ರಮಂದಿರದಲ್ಲಿ ಕಲೆಕ್ಷನ್ ಪ್ರಮಾಣ ಕುಸಿಯುತ್ತಿದೆ. ಈ ಕಾರಣದಿಂದ ನಿರ್ಮಾಪಕರು ಸಿನಿಮಾ ಬಿಡುಗಡೆ ಮಾಡಲು ಹಿಂದೇಟು ಹಾಕಬೇಕಾಗಿದೆ. ಶನಿವಾರ ಹಾಗೂ ಭಾನುವಾರ ಎರಡೂ ದಿನ ಸಿನಿಮಾ ಶೋ ಇರದ ಕಾರಣ ನಿರ್ಮಾಪಕರಿಗೆ ಬಲು ದೊಡ್ಡ ಹೊಡೆತ ಬಿದ್ದಿದೆ.

ಕನ್ನಡ ಚಿತ್ರರಂಗ ಅಲ್ಲದೇ ಬೇರೆ ಭಾಷೆಯ ಸಿನಿಮಾಗಳ ಬಿಡುಗಡೆಯೂ ಇದೇ ಕಾರಣದಿಂದ ಮುಂದಕ್ಕೆ ಹೋಗಿದೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿದೆ. ಅಂತೆಯೇ ಜ.14ರಂದು ತೆರೆಗೆ ಬರಬೇಕಿದ್ದ ಪ್ರಭಾಸ್‌ ನಟನೆಯ ‘ರಾಧೆ ಶ್ಯಾಮ್‌’ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಕೊರೋನಾ ಮಹಾಮಾರಿಯ ಆರ್ಭಟ ತಗ್ಗುವವರೆಗೆ ತಾಳ್ಮೆಯಿಂದ ಕಾಯದೆ ಬೇರೆ ವಿಧಿಯಿಲ್ಲ ಎನ್ನುವ ಸ್ಥಿತಿ ಚಿತ್ರ ನಿರ್ಮಾಪಕರಿಗೆ ಎದುರಾಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!