ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ರಾಜ್ಯ ಸರ್ಕಾರ ಥಿಯೇಟರ್‌ಗೆ ಶೇ. 50 ಸೀಟು ಭರ್ತಿಗೆ ಅವಕಾಶ ಕಲ್ಪಿಸುವ ನಿಯಮ ಜಾರಿಗೆ ತಂದಿರುವುದು ಕನ್ನಡ ಚಿತ್ರರಂಗಕ್ಕೆ ಸಂಕಷ್ಟ ಉಂಟು ಮಾಡಿದೆ.
ಜನವರಿ 5 ರ ರಾತ್ರಿ 10 ಗಂಟೆಯಿಂದ ಅನ್ವಯಿಸುವಂತೆ ಹೊಸ ಮಾರ್ಗಸೂಚಿಯನ್ನು ಸರಕಾರ ಬಿಡುಗಡೆ ಮಾಡಿದೆ. ಮಾಲ್, ಥಿಯೇಟರ್‌ಗಳಲ್ಲಿ ಶೇ. 50 ರಷ್ಟು ಜನರು ಸೇರಲು ಮಾತ್ರ ಅನುಮತಿ ನೀಡಲಾಗಿದೆ. ಈ ಆದೇಶ ಕನ್ನಡದ ಹೊಸ ಚಿತ್ರ ಬಿಡುಗಡೆ ಸೇರಿದಂತೆ ಚಿತ್ರ ಗಳಿಕೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೆಲ ವಾರದ ಹಿಂದಷ್ಟೇ ಕನ್ನಡದಲ್ಲಿ ಕೆಲ ಸಿನಿಮಾಗಳು ಬಿಡುಗಡೆಯಾಗಿವೆ. ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಅಜಯ್ ರಾವ್ ನಟನೆಯ ‘ಲವ್ ಯು ರಚ್ಚು’, ಪ್ರಜ್ವಲ್ ದೇವರಾಜ್ ನಟನೆಯ ‘ಅರ್ಜುನ್ ಗೌಡ’ ದಿಗಂತ್ ನಟನೆಯ ‘ಹುಟ್ಟುಹಬ್ಬದ ಶುಭಾಶಯಗಳು’ ಬಿಡುಗಡೆಯಾಗಿವೆ. ಸಿನಿಮಾ ರಿಲೀಸ್ ಆದ ಒಂದು – ಎರಡು ವಾರದ ಒಳಗೆ ಶೇಕಡ 50 ಸೀಟು ಸಾಮರ್ಥ್ಯದ ನಿಯಮ ಜಾರಿ ಬಂದಿರುವುದು ಚಿತ್ರದ ನಿರ್ಮಾಪಕರಲ್ಲಿ ಆತಂಕವನ್ನುಂಟು ಮಾಡಿದೆ.
ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಜ.7ರಂದು ತೆರೆಗೆ ಬರಬೇಕಾಗಿತ್ತು. ಆದರೆ ಹಲವು ರಾಜ್ಯಗಳಲ್ಲಿ ಥಿಯೇಟರ್ ಬಂದ್ ಆಗಿರುವ ಕಾರಣ ಈ ಚಿತ್ರದ ಬಿಡುಗಡೆ ಮುಂದೂಡಲಾಗಿದೆ. ಆರ್ ಆರ್ ಆರ್ ಚಿತ್ರ ಬಿಡುಗಡೆಯಾಗುವ ಕಾರಣದಿಂದ ಕನ್ನಡದ ಯಾವುದೇ ಬಹು ನಿರೀಕ್ಷಿತ ಚಿತ್ರಗಳು ಜನವರಿ ಮೊದಲ ಎರಡು ವಾರಗಳಲ್ಲಿ ಬಿಡುಗಡೆಯಾಗುತ್ತಿಲ್ಲ. ಇದು ತುಸು ನೆಮ್ಮದಿಯನ್ನು ನಿರ್ಮಾಪಕರಿಗೆ ತಂದಿದೆ. ಆದರೆ ಸರಕಾರ ಶೇಕಡಾ 50 ಸೀಟು ಸಾಮರ್ಥ್ಯದ ಪ್ರದರ್ಶನ ನಿಯಮವನ್ನು ಮುಂದುವರೆಸಿದಲ್ಲಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ನಷ್ಟ ಉಂಟಾಗುವ ಸಾಧ್ಯತೆ ಇದೆ.
ಕೊರೋನಾ ಸೋಂಕು ಕಡಿಮೆಯಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿ ಎಂದು ಕನ್ನಡ ಚಿತ್ರರಂಗ ಹಾಗೂ ಸಿನಿಪ್ರಿಯರು ಆಶಿಸಿದ್ದಾರೆ.
____
Be the first to comment