ಕರ್ಮ ಸಿದ್ಧಾಂತ ನೆನಪಿಸುವ ‘ ಲವ್ ಯೂ ರಚ್ಚು ‘
ಚಿತ್ರ: ಲವ್ ಯೂ ರಚ್ಚು
ನಿರ್ದೇಶಕ: ಶಂಕರ್ ರಾಜ್
ನಿರ್ಮಾಪಕ: ಗುರು ದೇಶಪಾಂಡೆ
ತಾರಾಗಣ: ಅಜಯ್ ರಾವ್, ರಚಿತಾ ರಾಮ್, ಅಚ್ಚುತ್ ಕುಮಾರ್ ಇತರರು.
ರೇಟಿಂಗ್: 3.5/5
ವಿವಾದಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ ‘ ಲವ್ ಯೂ ರಚ್ಚು ‘ ಚಿತ್ರ, ಕರ್ಮ ಸಿದ್ಧಾಂತದ ಸಂದೇಶವನ್ನು ನೀಡುವ ಯತ್ನ ಮಾಡುತ್ತದೆ. ನೀನು ಮಾಡಿದ್ದು, ನಿನಗೆ ವಾಪಸ್ ಸಿಗುತ್ತದೆ ಎನ್ನುವ ಕರ್ಮ ಸಿದ್ಧಾಂತದ ಸಂದೇಶ ಸಾರುವ ಈ ಚಿತ್ರ, ನಿರ್ದೇಶಕರ ಒಂದಷ್ಟು ಟ್ವಿಸ್ಟ್ ನೀಡುವ ಪ್ರಯತ್ನದಿಂದ ಪ್ರೇಕ್ಷಕರಿಗೆ ಒಂದಷ್ಟು ಮನರಂಜನೆಯನ್ನು ಒದಗಿಸುತ್ತದೆ.
ಕೊಲೆಯ ಸುತ್ತ ನಡೆಯುವ ಸಿನಿಮಾದ ಬಗ್ಗೆ ಟ್ರೈಲರ್ ನಲ್ಲಿ ಸುಳಿವು ನೀಡಲಾಗಿತ್ತು. ಈ ಕೊಲೆಯ ಬಗ್ಗೆ ನಿರ್ದೇಶಕರು ಕೊನೆಯಲ್ಲಿ ನೀಡಿರುವ ಟ್ವಿಸ್ಟ್ ಅವರನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಜಸ್ಟ್ ಪಾಸ್ ಆಗುವಂತೆ ಮಾಡುವಲ್ಲಿ ಕಾಪಾಡಿದೆ.
ಚಿತ್ರದಲ್ಲಿ ಅಜಯ್ ರಾವ್ ಹಾಗೂ ರಚಿತಾ ರಾಮ್ ಜೋಡಿ ಗಮನ ಸೆಳೆಯುತ್ತದೆ. ರಚಿತಾ ರಾಮ್ ನಡೆಸುವ ಕೊಲೆಯನ್ನು ಮುಚ್ಚಿಟ್ಟು ರಕ್ಷಿಸುವ ಗಂಡನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಜಯ್ ರಾವ್ ಗೆ ಹೆಂಡತಿಯ ಮೇಲೆ ಅತೀವ ಪ್ರೀತಿ. ಆರಂಭದಲ್ಲಿ ಸಾಕಷ್ಟು ಕುತೂಹಲದೊಂದಿಗೆ ಸಾಗುವ ಚಿತ್ರಕಥೆ ಪ್ರೇಕ್ಷಕರನ್ನು ಕೊನೆವರೆಗೂ ಹಿಡಿದಿಡುವಲ್ಲಿ ಹೆಣಗಾಡುತ್ತದೆ. ನಿರ್ದೇಶಕರು ಇಲ್ಲಿ ಬಿಗಿ ಸ್ಕ್ರಿಪ್ಟ್ ಮಾಡುವಲ್ಲಿ ವಿಫಲವಾಗಿರುವ ಬಗ್ಗೆ ಅರಿವಿಗೆ ಬರುತ್ತದೆ.
‘ ಲವ್ ಯೂ ರಚ್ಚು ‘ ಎನ್ನುವ ಟೈಟಲ್ ಇದ್ದ ಮಾತ್ರಕ್ಕೆ ಇಲ್ಲಿ ರಚಿತಾ ಪಾತ್ರಕ್ಕೆ ಮಾತ್ರ ಪ್ರಾಮುಖ್ಯತೆ ನೀಡಲಾಗಿಲ್ಲ. ಅಜಯ್ ರಾವ್ ಪಾತ್ರಕ್ಕೂ ಪ್ರಾಮುಖ್ಯತೆ ಇದ್ದು, ಇವು ಒಂದರಲ್ಲಿ ಒಂದು ಬೆಸೆದುಕೊಂಡಿವೆ. ಆದರೆ ಒಟ್ಟಾರೆ ಸಿನಿಮಾ ನೋಡುವ ಹೊತ್ತಿಗೆ ಈ ಚಿತ್ರ, ಇನ್ಯಾವುದೋ ಸಿನಿಮಾದ ನೆನಪು ತರುತ್ತದೆ. ಕಥೆಯಲ್ಲಿ ನಿರ್ದೇಶಕರು ಎಡವಿದ್ದರೂ, ಕೊನೆಯ ಟ್ವಿಸ್ಟ್ ಚಿತ್ರವನ್ನು ಕಾಪಾಡಿದೆ. ಯಾರನ್ನು ಯಾರೂ ಕ್ಷಮಿಸಿದರೂ, ಕರ್ಮ ಬಿಡುವುದಿಲ್ಲ ಎನ್ನುವುದು ಈ ಚಿತ್ರಕ್ಕೂ, ನಿರ್ದೇಶಕರಿಗೂ ಅನ್ವಯಿಸುತ್ತದೆ.
ಚಿತ್ರಕ್ಕೆ ಸಂಗೀತ ನೀಡಿರುವ ಮಣಿಕಾಂತ್ ಕದ್ರಿ ಅವರು ತಮ್ಮ ಕೆಲಸದ ಮೂಲಕ ಗಮನ ಸೆಳೆಯುತ್ತಾರೆ. ನಟನೆಯ ಮೂಲಕ ನಾಯಕ, ನಾಯಕಿ ಇಬ್ಬರೂ ಪ್ರೇಕ್ಷಕರ ಮನಸ್ಸು ಗೆಲ್ಲುವ ಯತ್ನ ಮಾಡಿದ್ದಾರೆ. ಹಳೇ ಟೇಪ್ ರೆಕಾರ್ಡರನ್ನು ತಿರುವಿ ಹಾಕಿದ ರೀತಿಯ ಚಿತ್ರಕಥೆ ಇಲ್ಲದೆ ಹೋಗಿದ್ದರೆ, ಚಿತ್ರ ಇನ್ನೆಲ್ಲಿಗೋ ಹೋಗುವ ಸಾಧ್ಯತೆ ಇತ್ತು ಎಂದು ಸಿನಿಮಾ ನೋಡಿದ ಪ್ರೇಕ್ಷಕರಿಗೆ ಅನಿಸಿದರೆ ಸುಳ್ಳಲ್ಲ.
Be the first to comment