ನಂದಮೂರಿ ಬಾಲಕೃಷ್ಣ ನಟನೆಯ ‘ಅಖಂಡ’ ಸಿನಿಮಾ ಜನವರಿ 12ರಿಂದ ಡಿಸ್ನಿ ಹಾಟ್ ಸ್ಟಾರ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಈ ಬಗ್ಗೆ ಮುಂದಿನ ಕೆಲವೇ ದಿನಗಳಲ್ಲಿ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿದೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಪಡೆದುಕೊಂಡಿರುವ ಸ್ಟಾರ್ ಮಾ ಸಂಸ್ಥೆಯು ಫೆಬ್ರವರಿ 27 ರಂದು ಅಖಂಡ ಸಿನಿಮಾ ಟೆಲಿಕಾಸ್ಟ್ ಮಾಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
‘ಅಖಂಡ’ ಮಾಸ್ ಡೈರೆಕ್ಟರ್ ಬೋಯಪಾಟಿ ಶ್ರೀನು ನಿರ್ದೇಶನದ ಆಕ್ಷನ್ ಚಿತ್ರವಾಗಿದೆ. ನಂದಮೂರಿ ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಡಿಸೆಂಬರ್ 2 ರಂದು ವಿಶ್ವಾದ್ಯಂತ ಈ ಚಿತ್ರ ಬಿಡುಗಡೆಯಾಗಿ ಉತ್ತಮ ಯಶಸ್ಸು ಕಂಡಿದೆ. 10 ದಿನದಲ್ಲಿ 100 ಕೋಟಿ ರೂ. ಕಲೆಕ್ಷನ್ ದಾಖಲೆಯನ್ನು ಮಾಡುವಲ್ಲಿ ಚಿತ್ರ ಯಶಸ್ವಿಯಾಗಿತ್ತು.
ಕೊರೊನಾ ಎರಡನೇ ಅಲೆಯ ನಂತರ ತೆರೆಕಂಡ ತೆಲುಗು ಚಿತ್ರಗಳಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎನ್ನುವ ದಾಖಲೆ ‘ಅಖಂಡ’ ಪಾಲಾಗಿದೆ. ಇದು ಬಾಲಕೃಷ್ಣ ನಟನೆಯ ಮೊದಲ 100 ಕೋಟಿ ರೂಪಾಯಿ ಕಲೆಕ್ಷನ್ ಚಿತ್ರ ಎನ್ನಲಾಗಿದೆ.
‘ಅಖಂಡ’ದಲ್ಲಿ ಬಾಲಕೃಷ್ಣ ಅವರು ದ್ವಿಪಾತ್ರ ಮಾಡಿದ್ದು, ಒಂದು ಪಾತ್ರದಲ್ಲಿ ಅಘೋರನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವಿಮರ್ಶಕರು ಮೆಚ್ಚುಗೆ ಸೂಚಿಸಿ, ಬಾಲಕೃಷ್ಣ ಅಭಿನಯವನ್ನು ಹೊಗಳಿದ್ದಾರೆ. ಬಾಲಕೃಷ್ಣ ಬಿಟ್ಟು ಯಾವ ನಟನೂ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಧ್ಯವೇ ಇಲ್ಲ ಎನ್ನುವ ಮಾತು ಕೇಳಿ ಬಂದಿದೆ.
ಚಿತ್ರದಲ್ಲಿ ಪ್ರಜ್ಞಾ ಜೈಸ್ವಾಲ್ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿಬಾಬು, ಶ್ರೀಕಾಂತ್ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ತಮನ್ ಸಂಗೀತ ಸಂಯೋಜಿಸಿದ್ದಾರೆ.
ಈ ಚಿತ್ರ ಹಿಂದಿಗೂ ರಿಮೇಕ್ ಆಗುತ್ತಿದೆ ಎನ್ನುವ ಮಾಹಿತಿ ಬಂದಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಅಥವಾ ಅಜಯ್ ದೇವಗನ್ ನಟಿಸಲಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
________

Be the first to comment