ಮಾದಕ ನಟಿ ಸನ್ನಿ ಲಿಯೋನ್ ನರ್ತಿಸಿರುವ ‘ಮಧುಬನ್’ ಹಾಡು ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ ಅವರನ್ನು ಬಂಧಿಸುವಂತೆ ದೂರು ದಾಖಲಾಗಿದೆ.
ಸನ್ನಿ ಲಿಯೋನ್ ನರ್ತಿಸಿರುವ ‘ಮಧುಬನ್’ ಹಾಡಿನ ವಿರುದ್ಧ ಮಥುರಾದ ಅರ್ಚಕರು ಪ್ರತಿಭಟನೆ ಮಾಡುವ ಜೊತೆಗೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ಮಧುಬನ್’ ಎಂಬುದು ಪವಿತ್ರ ಸ್ಥಳ. ರಾಧೆ ಕೃಷ್ಣನ ಭಕ್ತೆ ಹೊರತು ನರ್ತಕಿ ಅಲ್ಲ. ಆದರೆ ‘ಮಧುಬನ್’ ಹಾಡಿನಲ್ಲಿ ಸನ್ನಿ ಲಿಯೋನ್ ಗ್ಲಾಮರಸ್ ಆಗಿ ನರ್ತಿಸುತ್ತಿರುವುದು ರಾಧೆಗೆ, ಮಧುಬನ್‌ಗೆ ಮಾಡಿದ ಅಪಮಾನ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಡನ್ನು ಹಿಂಪಡೆಯುವ ಜೊತೆಗೆ ಸನ್ನಿ ಲಿಯೋನ್, ಗಾಯಕಿ ಕನ್ನಿಕಾ ಕಪೂರ್ ಬೇಷರತ್ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮಧ್ಯ ಪ್ರದೇಶದ ಸರ್ಕಾರದ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ”ಸನ್ನಿ ಲಿಯೋನ್ ನರ್ತಿಸಿರುವ ಹಾಡು ಹಿಂದು ಭಾವನೆಗಳಿಗೆ ಧಕ್ಕೆ ತರುತ್ತಿದೆ. ಹಾಡನ್ನು ಹಿಂಪಡೆಯಬೇಕು. ಇಲ್ಲವಾದರೆ ಕಾನೂನು ಕ್ರಮ ಎದುರಿಸಲು ಸಜ್ಜಾಗಬೇಕು’ ಎಂದು ಹಾಡನ್ನು ಬಿಡುಗಡೆ ಮಾಡಿದ್ದ ಸಾರೆಗಾಮಾ ಸಂಗೀತ ಸಂಸ್ಥೆಗೆ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅನೇಕರು ಸನ್ನಿ ಲಿಯೋನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅರೆಸ್ಟ್ ಸನ್ನಿ ಲಿಯೋನ್’ ಟ್ರೆಂಡ್ ಆಗುತ್ತಿದೆ.
ವಿವಾದದ ಬಗ್ಗೆ ಸಾರೆಗಾಮಾ ಸಂಗೀತ ಸಂಸ್ಥೆ ಸ್ಪಷ್ಟನೆ ನೀಡಿದೆ. ”ಮಧುಬನ್ ಹಾಡಿನ ಸಾಹಿತ್ಯ ಮತ್ತು ಹೆಸರನ್ನು ಬದಲಾವಣೆ ಮಾಡುತ್ತೇವೆ. ‘ಮಧುಬನ್’ ಹಾಡು ಎಲ್ಲೆಲ್ಲಿ ಪ್ರಸಾರವಾಗುತ್ತಿದೆಯೋ ಆ ವೇದಿಕೆಗಳಲ್ಲಿ ಹೊಸ ಹಾಡನ್ನು ಹಾಕುತ್ತೇವೆ” ಎಂದು ತಿಳಿಸಿದೆ.
‘ನಾಚೇ ಮಧುಬನ್‌ಮೆ ರಾಧಿಕಾ’ ಎಂಬ ಸಾಹಿತ್ಯ ಉಳ್ಳ ಹಾಡಿನಲ್ಲಿ ಸನ್ನಿ ಲಿಯೋನ್ ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಕನ್ನಿಕಾ ಕಪೂರ್ ಹಾಡಿದ್ದಾರೆ. ಸಂಗೀತ ಶಾರಿಬ್ ಮತ್ತು ತೋಶಿ ಅವರದ್ದು. ಹಾಡು ಸಾರೆಗಾಮಾ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗಿದ್ದು 1 ಕೋಟಿಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ.
___
Be the first to comment