‘ರೈಡರ್ ‘ನ್ನೂ ಕಾಡಿದ ಪೈರಸಿ: ದೂರು ದಾಖಲು

ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಚಿತ್ರ ಪೈರಸಿ ಆಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪೈರಸಿ ಆಗಿರುವ ಬಗ್ಗೆ ನಿರ್ಮಾಪಕ ಲಹರಿ ವೇಲು ಅವರು ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಡಿ.24 ರಂದು ರೈಡರ್ ರಾಜ್ಯಾದ್ಯಂತ ಬಿಡುಗಡೆ ಆಗಿತ್ತು. ಪೈರಸಿಯಿಂದ ನಿರ್ಮಾಪಕರಿಗೆ ದೊಡ್ಡ ನಷ್ಟ ಆಗಲಿದೆ. ಸಿನಿಮಾವನ್ನು ಪೈರಸಿ ಮಾಡಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಿರ್ಮಾಪಕ ಲಹರಿ ವೇಲು ದೂರಿನಲ್ಲಿ ಕೋರಿದ್ದಾರೆ.

“ಸಿನಿಮಾಗಳು ಪೈರಸಿಯಾದರೆ ಯಾರು ಸಹ ಚಿತ್ರಮಂದಿರಕ್ಕೆ ಬರುವುದಿಲ್ಲ. ಸಾಲ ಮಾಡಿ ಬಂಡವಾಳ ಹೂಡಿ ಸಿನಿಮಾ ಮಾಡಿದ ನಿರ್ಮಾಪಕರು ಬೀದಿಗೆ ಬರುತ್ತಾರೆ. ಈ ಹಿಂದೆ ನಾನು ಸಾಕಷ್ಟು ನಿರ್ಮಾಪಕರು ತೊಂದರೆ ಅನುಭವಿಸಿದ್ದನ್ನು ನೋಡಿದ್ದೇನೆ. ಕನ್ನಡ ಚಿತ್ರಗಳು ಪೈರಸಿಯಾಗಿ ನಿರ್ಮಾಪಕರು ನಷ್ಟ ಅನುಭವಿಸಿದ್ದಾರೆ. ಕಿಡಿಗೇಡಿಗಳು ರೈಡರ್‌ ಸಿನಿಮಾವನ್ನು ಪೈರೆಸಿ ಮಾಡಿ ಟೆಲಿಗ್ರಾಂ ಆ್ಯಪ್ ಗೆ ಲಿಂಕ್‌ ಹಾಕಿದ್ದಾರೆ. ಈ ಬಗ್ಗೆ ಡಿಸಿಪಿ ವಿನಾಯಕ ಪಾಟೀಲ್ ಅವರಿಗೆ ದೂರು ನೀಡಲಾಗಿದೆ. ಡಿಸಿಪಿ ಅವರು ಅಪರಾಧಿಗಳನ್ನು ಬಂಧಿಸುವ ಭರವಸೆ ನೀಡಿದ್ದಾರೆ’ ಎಂದು ವೇಣು ಹೇಳಿದ್ದಾರೆ.

ತಮಿಳಿನ ವೆಬ್‌ಸೈಟ್‌ ಒಂದರಿಂದ ‘ರೈಡರ್‌’ ಚಲನಚಿತ್ರ ಪೈರಸಿಯಾಗಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ನಾಯಕ ನಟ ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ.

“ಪೈರಸಿಯಿಂದ ಚಿತ್ರೋದ್ಯಮದ ಮೇಲೆ ಗಂಭೀರ ಪರಿಣಾಮಗಳಾಗುತ್ತಿದೆ. ಚಿ​ತ್ರ​ರಂಗ ಉ​ಳಿ​ಯ​ಬೇ​ಕೆಂದರೆ ಪೈರಸಿ ಹಾ​ವ​ಳಿ​ಯನ್ನು ತ​ಡೆ​ಯ​ಬೇಕು” ಎಂದು ಅವರು ಹೇಳಿದ್ದಾರೆ.

ರೈಡರ್ ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ಅವರ ಕನ್ನಡದ ಮೊದಲ ಕಮರ್ಷಿಯಲ್ ಚಿತ್ರ ಆಗಿದೆ. ಈ ಸಿನಿಮಾದಲ್ಲಿ ನಿಖಿಲ್ ಕುಮಾರ್, ಕಶ್ಮೀರ ಪರದೇಶಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಲಹರಿ ಪ್ರೊಡಕ್ಷನ್ಸ್‌ ಹಾಗೂ ಶಿವನಂದಿ ಎಂಟ್ರೈನ್‌ಮೆಂಟ್ಸ್ ನಿರ್ಮಾಣ ಮಾಡಿವೆ.

ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣವಿದೆ. ಸಂಪದ, ದತ್ತಣ್ಣ, ಅಚ್ಯುತ್‌ಕುಮಾರ್‌, ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌. ಪೇಟೆ ತಾರಾಗಣದಲ್ಲಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!