ರಾಜ ಮೌಳಿ ನಿರ್ದೇಶನದ ‘ಆರ್ ಆರ್ ಆರ್ ‘ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
ಜನವರಿ 7ರಂದು ‘ಆರ್ ಆರ್ ಆರ್’ ಸಿನಿಮಾ ತೆರೆಗೆ ಬರುತ್ತಿರುವುದಾಗಿ ಘೋಷಣೆ ಮಾಡಲಾಗಿದೆ. ಈಗ ಕೊವಿಡ್ ಸಂಖ್ಯೆ ಹೆಚ್ಚುತ್ತಿದ್ದು ಮತ್ತೆ ಚಿತ್ರಮಂದಿರಗಳಲ್ಲಿ ಶೇ. 50 ಪ್ರೇಕ್ಷಕರ ಉಪಸ್ಥಿತಿಗೆ ಸರ್ಕಾರ ಆದೇಶಿಸುವ ಸಾಧ್ಯತೆ ಇದೆ. ಹಾಗಾದಲ್ಲಿ ‘ಆರ್‌ಆರ್‌ಆರ್’ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಡಲಿದೆ ಎಂದು ಹೇಳಲಾಗುತ್ತಿದೆ.
ಚಿತ್ರತಂಡ ಹೈದರಾಬಾದ್ನ ಎಲ್ಬಿ ಸ್ಟೇಡಿಯಂನಲ್ಲಿ ಡಿಸೆಂಬರ್ 30ರಂದು ಪ್ರೀ-ರಿಲೀಸ್ ಕಾರ್ಯಕ್ರಮ ನಡೆಸಲು ನಿರ್ಧರಿಸಿತ್ತು. ಇದಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲು ಚಿತ್ರತಂಡ ಯೋಜನೆ ರೂಪಿಸಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಸರಕಾರದಿಂದ ಅನುಮತಿ ಸಿಕ್ಕಿಲ್ಲ. ಹೀಗಾಗಿ ಈ ಕಾರ್ಯಕ್ರಮ ಕ್ಯಾನ್ಸಲ್ ಆಗಿದೆ ಎಂದು ತಿಳಿದು ಬಂದಿದೆ.
ಈ ನಡುವೆ ‘ಆರ್‌ಆರ್‌ಆರ್’ ತಂಡದ ಕಲಾವಿದರ ಸಂಭಾವನೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ರಾಮ್ ಚರಣ್ ಮತ್ತು ಜ್ಯೂ. ಎನ್‌ಟಿಆರ್ ತಲಾ 45 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಆಲಿಯಾ ಭಟ್ ಅವರಿಗೆ 9 ಕೋಟಿ ರೂ., ಅಜಯ್ ದೇವಗನ್ ಅವರು 25 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ.
ಅತೀ ಬೇಡಿಕೆಯ ನಿರ್ದೇಶಕರಲ್ಲಿ ಒಬ್ಬರಾಗಿರುವ ರಾಜಮೌಳಿ ಅವರಿಗೆ ಸಿನಿಮಾದ ಲಾಭದಲ್ಲಿ ಶೇ.30ರಷ್ಟು ಪಾಲು ನೀಡಲು ಒಪ್ಪಂದವಾಗಿದೆ ಎಂದು ಹೇಳಲಾಗಿದೆ. ‘ಆರ್‌ಆರ್‌ಆರ್’ ಚಿತ್ರವನ್ನು ಡಿವಿವಿ ದಾನಯ್ಯ ಅವರು 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ್ದಾರೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರದ ಕರ್ನಾಟಕದ ವಿತರಣೆ ಹಕ್ಕನ್ನು ‘ಕೆವಿಎನ್’ ಪ್ರೊಡಕ್ಷನ್ಸ್ ಸಂಸ್ಥೆ ಪಡೆದುಕೊಂಡಿದೆ.
‘ಆರ್‌ಆರ್‌ಆರ್’ ಚಿತ್ರ 1920ರ ದಶಕದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು, ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ ಆಗಿದೆ. ಈ ಚಿತ್ರದಲ್ಲಿ ಸೀತಾರಾಮರಾಜು ಪಾತ್ರದಲ್ಲಿ ಚರಣ್, ಕೊಮರಂ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ.
___
Be the first to comment