ಸಂಕ್ರಾಂತಿಗೆ ‘ಉಗ್ರಾವತಾರ’ ತೆರೆಗೆ

ಪ್ರಿಯಾಂಕಾ ಉಪೇಂದ್ರ ನಟಿಸುತ್ತಿರುವ ‘ಉಗ್ರಾವತಾರ’ ಚಿತ್ರ ಸಂಕ್ರಾಂತಿಗೆ ತೆರೆಯ ಮೇಲೆ ಬರುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ.

ಗುರುಮೂರ್ತಿ ನಿರ್ದೇಶನದ ಈ ಚಿತ್ರದ ಟೀಸರ್‌ ಅನ್ನು ನಟ ಉಪೇಂದ್ರ ಅವರು ಈಗಾಗಲೇ ಪ್ರಿಯಾಂಕಾ ಉಪೇಂದ್ರ ಅವರ ಜನ್ಮ ದಿನದಂದು ಬಿಡುಗಡೆ ಮಾಡಿದ್ದಾರೆ. ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಪ್ರಿಯಾಂಕ ಕಾಣಿಸಿಕೊಂಡಿದ್ದು, ಮೊದಲ ಬಾರಿಗೆ ಅವರು ಸಾಹಸ ಪ್ರಧಾನ ಕತೆಯಲ್ಲಿ ನಟಿಸಿದ್ದಾರೆ.

“ಆರಂಭದಲ್ಲಿ ಸಾಹಸ ದೃಶ್ಯಗಳಲ್ಲಿ ನಟಿಸಲು ಭಯವಿತ್ತು. ಇದು ನಿನ್ನಿಂದ ಆಗದು ಎಂದು ಹಲವರು ಹೇಳಿದರು. ನನ್ನ ಪ್ರಯತ್ನ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಫೈಟ್‌ಗಳು ಸ್ವಾಭಾವಿಕವಾಗಿ ಬರಬೇಕೆಂದು ಕೆಲವು ಕಡೆ ಡ್ಯೂಪ್ ಬಳಸಿಲ್ಲ. ಪ್ರೇಕ್ಷಕರು ಇಷ್ಟಪಟ್ಟರೆ ಇನ್ನು ಮುಂದೆ ಇಂತಹ ಪಾತ್ರಗಳಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ” ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.

“ಚಿತ್ರದಲ್ಲಿ ಸಾಮಾಜಿಕ ಸಂದೇಶವನ್ನು ಹೇಳಲಾಗಿದೆ. ಮಹಿಳೆಯರ ವಿರುದ್ಧದ ಶೋಷಣೆ, ಪೊಲೀಸರಿಂದ ಆಗುವ ತೊಂದರೆ ಮುಂತಾದ ವಿಷಯಗಳು ಇದರಲ್ಲಿವೆ” ಎಂದು ಪ್ರಿಯಾಂಕಾ ಉಪೇಂದ್ರ ತಿಳಿಸಿದ್ದಾರೆ.

“ವ್ಯಸನಗಳಿಂದ ತುಂಬಿಹೋಗಿರುವ ಸಮಾಜದಲ್ಲಿ ಇವೆಲ್ಲವನ್ನು ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಹೇಗೆ ಎದುರಿಸುತ್ತಾರೆ ಎನ್ನುವುದು ಸಿನಿಮಾದ ಕಥಾಹಂದರ” ಎಂದು ನಿರ್ದೇಶಕ ಗುರುಮೂರ್ತಿ ಹೇಳಿದ್ದಾರೆ.

ಚಿತ್ರದಲ್ಲಿ ಹಿರಿಯ ನಟ ಸುಮನ್ ಅವರು ಹಿರಿಯ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

ಉಗ್ರಾವತಾರ ಪ್ಯಾನ್‌ ಇಂಡಿಯಾ ಸಿನಿಮಾ ಆಗಿದೆ. ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಈ ಚಿತ್ರವನ್ನು ಎಸ್.ಜಿ.ಸತೀಶ ನಿರ್ಮಿಸಿದ್ದಾರೆ.‌‌ ಈ ಚಿತ್ರದ ನಿರ್ದೇಶಕ ಗುರುಮೂರ್ತಿ ಅವರು ಹಿಂದೆ ಸೌಂದರ್ಯ ನಿಲಯ ಚಿತ್ರ ನಿರ್ದೇಶನ ಮಾಡಿದ್ದರು. ಅವರ ಎರಡನೇ ಚಿತ್ರ ಆಗಿದೆ.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!