ಎಂಇಎಸ್ ಪುಂಡಾಟಿಕೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವ ಬೆನ್ನಿಗೇ, ‘ಲವ್ ಯೂ ರಚ್ಚು’ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಕೋಪ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 31 ಕ್ಕೆ ‘ಲವ್ ಯೂ ರಚ್ಚು’ ಸಿನಿಮಾ ರಿಲೀಸ್ ಗೆ ರೆಡಿ ಮಾಡಿಕೊಳ್ಳಲಾಗಿದೆ. ಇದೇ ದಿನ ಬಂದ್ ಮಾಡಿದರೆ ಚಿತ್ರಕ್ಕೆ ತೊಂದರೆಯಾಗುತ್ತದೆ ಎಂದು ಗುರು ದೇಶಪಾಂಡೆ ಆಕ್ರೋಶ ಹೊರ ಹಾಕಿದ್ದಾರೆ.
” ಕರ್ನಾಟಕ ಬಂದ್ ಮಾಡಿದರೆ 31 ಕ್ಕೆ ನಾವೆಲ್ಲಾ ಸೂಸೈಡ್ ಮಾಡ್ಕೋಬೇಕಾ? ಶುಕ್ರವಾರ ಬಂದ್ ಮಾಡ್ತೀವಿ ಅಂತಾರೆ. ಅಷ್ಟು ಗೊತ್ತಾಗಲ್ವಾ ಇವರಿಗೆ? ಈ ದಿನ ಬಂದ್ ಮಾಡಿದರೆ ಎಷ್ಟು ಕೋಟಿ ಲಾಸ್ ಆಗುತ್ತೆ? ಇದರ ಬಗ್ಗೆ ಯೋಚನೆ ಮಾಡೋದು ಬೇಡ್ವಾ? ” ಎಂದು ಅವರು ಪ್ರಶ್ನಿಸಿದ್ದಾರೆ.
“ಮೊದಲೇ ನಮ್ ಹೀರೋ ಸಪೋರ್ಟ್ ಮಾಡ್ತಿಲ್ಲ, ಬಂದ್ ಅಂತಾರೆ. ಇದೆಲ್ಲದರ ನಡುವೆ ನಮ್ಮ ಸಿನಿಮಾ ಓಡೋದು ಹೇಗೆ? ಏನು ಮಾಡಬೇಕು ಗೊತ್ತಾಗ್ತಿಲ್ಲ’ ಎಂದು ಗುರು ದೇಶಪಾಂಡೆ ಅವರು ಸಾ ರಾ ಗೋವಿಂದು ಸೇರಿದಂತೆ ಬಂದ್ ಬೆಂಬಲಿಸುತ್ತಿರುವವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಅಜಯ್ ರಾವ್, ರಚಿತಾ ರಾಮ್ ನಟನೆಯ ‘ಲವ್ ಯೂ ರಚ್ಚು’ ಸಿನಿಮಾ ಚಿತ್ರಮಂದಿರಗಳಲ್ಲಿ ಡಿಸೆಂಬರ್ 31 ರಂದು ಬಿಡುಗಡೆ ಆಗಲಿದೆ. ಈ ನಿಟ್ಟಿನಲ್ಲಿ ಚಿತ್ರತಂಡ ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಆದರೆ ಈಗ ಬಂದ್ ನ ಬಿಸಿ ಚಿತ್ರದ ನಿರ್ಮಾಪಕರ ಮೇಲೆ ಆಗಿದೆ.
ಈ ಚಿತ್ರದ ಶೂಟಿಂಗ್ ವೇಳೆ ಸ್ಟಂಟ್ ಮಾಸ್ಟರ್ ಒಬ್ಬರು ಸಾವಿಗೀಡಾದ ಹಿನ್ನೆಲೆ ನಿರ್ಮಾಪಕರು ಸೇರಿದಂತೆ ಚಿತ್ರತಂಡದ ಪ್ರಮುಖರ ಮೇಲೆ ಕೇಸ್ ದಾಖಲಾಗಿತ್ತು. ಕೆಲವರು ಜೈಲು ಕಂಬಿ ಎಣಿಸಿದ್ದರು. ಇದಲ್ಲದೇ ಚಿತ್ರದ ನಾಯಕ ಅಜಯ್ ರಾವ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ನಡುವೆ ಮನಸ್ತಾಪ ಉಂಟಾಗಿದ್ದು, ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅಜಯ್ ರಾವ್ ದೂರವುಳಿದಿದ್ದರು. ಬಳಿಕ ಅಜಯ್ ರಾವ್, ಪ್ರೊಡ್ಯೂಸರ್ ಜೊತೆ ವೇದಿಕೆ ಹತ್ತುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಹಲವು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಚಿತ್ರತಂಡಕ್ಕೆ ಈಗ ಕರ್ನಾಟಕ ಬಂದ್ ಬಿಸಿ ಉಂಟು ಮಾಡಿದೆ.
ಡಿಸೆಂಬರ್ 31 ರಂದು ಪ್ರಜ್ವಲ್ ನಟನೆಯ ಅರ್ಜುನ್ ಗೌಡ, ಯೋಗಿ ನಟನೆಯ ಒಂಬತ್ತನೇ ದಿಕ್ಕು, ದಿಗಂತ ನಟನೆಯ ಹುಟ್ಟುಹಬ್ಬದ ಶುಭಾಶಯಗಳು ಚಿತ್ರಗಳು ಬಿಡುಗಡೆಯಾಗುತ್ತಿವೆ. ಸಂಪೂರ್ಣ ಬಂದ್ ಆದಲ್ಲಿ ಈ ಚಿತ್ರಗಳ ಕಲೆಕ್ಷನ್ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.
___
Be the first to comment