’83’ ಚಿತ್ರಕ್ಕೆ ದೆಹಲಿಯಲ್ಲಿ ತೆರಿಗೆ ವಿನಾಯಿತಿ

ಕಬೀರ್ ಖಾನ್ ನಿರ್ದೇಶನದ ಬಹುನಿರೀಕ್ಷಿತ ’83’ ಚಿತ್ರಕ್ಕೆ ತೆರಿಗೆ ವಿನಾಯತಿಯನ್ನು ದೆಹಲಿ ಸರ್ಕಾರ ಘೋಷಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ ಗ್ರೂಪ್‌ನ ಸಿಇಒ ಶಿಬಾಶಿಶ್ ಸರ್ಕಾರ್‌ ಅವರು, ‘ದೆಹಲಿಯಲ್ಲಿ 83 ಚಿತ್ರವು ತೆರಿಗೆ ಮುಕ್ತ ಎಂದು ಘೋಷಿಸಲಾಗಿದೆ. ಸಿಎಂ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಅವರಿಗೆ ಧನ್ಯವಾದಗಳು’ ಎಂದು ಅವರು ತಿಳಿಸಿದ್ದಾರೆ.

ಕಪಿಲ್‌ ದೇವ್‌ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದ ರೋಚಕ ಕಥೆಯನ್ನು ’83’ ಚಿತ್ರ ಹೊಂದಿದೆ. ಚಿತ್ರ ಡಿಸೆಂಬರ್‌ 24ರಂದು ಬಿಡುಗಡೆಯಾಗಲಿದೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರಲಿದೆ.

ಕಪಿಲ್ ದೇವ್ ಅವರ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಕಪಿಲ್‌ ದೇವ್‌ ಅವರ ಪತ್ನಿ ರೋಮಿ ದೇವ್ ಅವರ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.

15 ವರ್ಷಗಳ ಹಿಂದೆ ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ್ದ ‘ಐಶ್ವರ್ಯ’ ಸಿನಿಮಾದ ಮೂಲಕ ದೀಪಿಕಾ ಪಡುಕೋಣೆ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಅವರು ಯಾವುದೇ ಕನ್ನಡ ಚಿತ್ರಗಳಲ್ಲಿ ನಟಿಸಿಲ್ಲ. ಈ ಮೂಲಕ 15 ವರ್ಷದ ಬಳಿಕ ಕನ್ನಡದಲ್ಲಿ ಮತ್ತೆ ದೀಪಿಕಾ ಪಡುಕೋಣೆ ಸಿನಿಮಾ ನೋಡುವ ಅವಕಾಶ ಸಿಗಲಿದೆ.

’83’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಈ ಸಿನಿಮಾ ಬಿಡುಗಡೆ ವಿಳಂಬ ಆಯಿತು. ಚಿತ್ರದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು, ಗಮನ ಸೆಳೆದಿದೆ.

ಕಬೀರ್ ಖಾನ್ ನಿರ್ದೇಶಿಸಿರುವ ’83’ ಚಿತ್ರ ಬಾಲಿವುಡ್‌ನ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು ಆಗಿದೆ. ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಮದುವೆ ಆದ ಬಳಿಕ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಇದಾಗಿದೆ.

ಕನ್ನಡ ಸಿನಿಮಾದಿಂದ ನಟನೆ ಆರಂಭಿಸಿದ್ದ ದೀಪಿಕಾ ಪಡುಕೋಣೆ ಈಗ ಮತ್ತೆ ಕನ್ನಡದ ಡಬ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ ಆಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!