ಕನ್ನಡಿಗರ ಮೆಚ್ಚುಗೆ ಪಡೆದ ಆಲಿಯಾ ಭಟ್‌

ಕನ್ನಡದಲ್ಲಿ ಅಭಿನಯ ಆರಂಭಿಸಿ ಬೇರೆ ಭಾಷೆಯಲ್ಲಿ ಹೆಸರು ಮಾಡಿದ ಕನ್ನಡದ ನಟಿಯರು ಕನ್ನಡದಲ್ಲಿ ಮಾತನಾಡಲು ಬಿಗುಮಾನ ತೋರಿಸುವ ಹೊತ್ತಿನಲ್ಲಿ, ಬಾಲಿವುಡ್ ನಟಿ ಆಲಿಯಾ ಭಟ್‌ ತಮ್ಮ ಸಿನಿಮಾ ಬಗ್ಗೆ ಕನ್ನಡದಲ್ಲಿ ಟ್ವೀಟ್‌ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ರಣಬೀರ್‌ ಕಪೂರ್‌ ಮತ್ತು ನಟಿ ಆಲಿಯಾ ಭಟ್‌ ಅಭಿನಯದ ʻಬ್ರಹ್ಮಾಸ್ತ್ರ ಪಾರ್ಟ್‌ ಒನ್‌ʼ ಸಿನಿಮಾ ಮುಂದಿನ ವರ್ಷದ ಸೆ.9 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ದಕ್ಷಿಣ ಭಾರತದ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಈ ಬಗ್ಗೆ ಆಲಿಯಾ ಭಟ್‌ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

“ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ ಮಹಾಯೋಧನೊಬ್ಬನ ಉದಯವಾಗಲಿದೆ” ಎಂದು ಆಲಿಯಾ ಭಟ್‌ ಕನ್ನಡದಲ್ಲಿ ಟ್ವೀಟ್‌ ಮಾಡಿದ್ದಾರೆ.

ʻಬ್ರಹ್ಮಾಸ್ತ್ರ’ ಸಿನಿಮಾವನ್ನು ಅಯನ್‌ ಮುಖರ್ಜಿ ನಿರ್ದೇಶಿಸಿದ್ದಾರೆ. ಚಿತ್ರವನ್ನು ಕರಣ್‌ ಜೋಹರ್‌ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಹಿಂದಿ ಅಲ್ಲದೇ, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಯಾಗಲಿದೆ. ಅಮಿತಾಬ್‌ ಬಚ್ಚನ್‌, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್‌ ಸೇರಿದಂತೆ ಖ್ಯಾತ ನಟರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಬ್ರಹ್ಮಾಸ್ತ್ರ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿತ್ತು.

ಕನ್ನಡದಲ್ಲಿ ಐಶ್ವರ್ಯ ಸಿನಿಮಾದ ಮೂಲಕ ವೃತ್ತಿ ಜೀವನ ಆರಂಭಿಸಿದ ದೀಪಿಕಾ ಪಡುಕೋಣೆ ಅವರು ಬಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಆದರೆ ಅವರು ಎಂದೂ ಕನ್ನಡ ಚಿತ್ರದಲ್ಲಿ ನಟಿಸಿರುವ ಬಗ್ಗೆ ಹೇಳಿಲ್ಲ. ಅಂತೆಯೇ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಶ್ಮಿಕ ಮಂದಣ್ಣ ಅವರು ಸಹ ತಮ್ಮ ಕನ್ನಡ ವಿರೋಧಿ ಧೋರಣೆಗಾಗಿ ಸಾಕಷ್ಟು ಬಾರಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಈ ನಟಿಯರ ನಡುವೆ ಆಲಿಯಾ ಭಟ್‌ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


Be the first to comment

Leave a Reply

Your email address will not be published. Required fields are marked *

Translate »
error: Content is protected !!