ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದ ಎದುರು ಅದಿತಿ ಪ್ರಭುದೇವ ನಟನೆಯ ಕನ್ನಡದ ಚಿತ್ರ ‘ಆನ’ ಡಿಸೆಂಬರ್ 17ರಂದು ಬಿಡುಗಡೆ ಆಗುತ್ತಿದೆ.
ಪುಷ್ಪ’ ಚಿತ್ರದಿಂದಾಗಿ ಕನ್ನಡದ ‘ಆನ’ ಸಿನಿಮಾಗೆ ರಾಜ್ಯದಲ್ಲಿ ಬೇಕಾದಷ್ಟು ಥಿಯೇಟರ್ಗಳು ಸಿಗುತ್ತಿಲ್ಲ. ಆದರೂ ಧೈರ್ಯ ಮಾಡಿ ಈ ಚಿತ್ರವನ್ನು ರಿಲೀಸ್ ಮಾಡಲು ನಿರ್ಮಾಪಕಿ ಪೂಜಾ ವಸಂತ್ ಕುಮಾರ್ ಮುಂದಾಗಿದ್ದಾರೆ. ಪರಭಾಷೆ ಸಿನಿಮಾಗಳ ಅಬ್ಬರದ ನಡುವೆ ಈ ಚಿತ್ರ ಗೆಲ್ಲಲು ಕನ್ನಡಿಗರು ಬೆಂಬಲ ನೀಡಬೇಕು ಎಂದು ನಿರ್ದೇಶಕ ಮನೋಜ್ ನಡಲುಮನೆ ವಿನಂತಿ ಮಾಡಿದ್ದಾರೆ.
ಲಾಕ್ಡೌನ್ ಹಿನ್ನೆಲೆಯನ್ನು ಇಟ್ಟುಕೊಂಡು ‘ಆನ’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಭಾರತದ ಮೊದಲ ಮಹಿಳಾ ಸೂಪರ್ ಹೀರೋ ಸಿನಿಮಾ ಎಂದು ಈ ಚಿತ್ರವನ್ನು ಚಿತ್ರತಂಡ ಕರೆದುಕೊಂಡಿದೆ. ವಿಶೇಷ ಶಕ್ತಿ ಇರುವ ಯುವತಿಯ ಪಾತ್ರದಲ್ಲಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.
“ನನ್ನ ಪಾತ್ರದ ಬಗ್ಗೆ ಕೇಳಿದಾಗ ಎಗ್ಸೈಟ್ ಆಯಿತು. ಮೊದಲು ನನ್ನಿಂದ ಈ ಪಾತ್ರ ಮಾಡಲು ಸಾಧ್ಯವೇ ಎನಿಸಿತ್ತು. ಒಟ್ಟಾರೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಬೇರೆ ಭಾಷೆಯ ಸಿನಿಮಾಗಳ ಎದುರು ಕನ್ನಡದ ಸಿನಿಮಾಗಳು ಸೊರಗುತ್ತಿದ್ದು, ಒಳ್ಳೆಯ ಕನ್ನಡ ಸಿನಿಮಾವನ್ನು ರಾಜ್ಯದ ಸಿನಿಪ್ರಿಯರು ಗೆಲ್ಲಿಸಬೇಕು’ ಎಂದು ಅದಿತಿ ಪ್ರಭುದೇವ ಕೋರಿದ್ದಾರೆ.
ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸುನೀಲ್ ಪುರಾಣಿಕ್ ಅವರು ‘ಆನ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
“ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್ಗೆ ಜನರಿಂದ ಮೆಚ್ಚುಗೆ ಸಿಕ್ಕಿದೆ. ಹಾಗಾಗಿ ಪ್ರೇಕ್ಷಕರು ಥಿಯೇಟರ್ಗೆ ಬಂದು ಈ ಸಿನಿಮಾ ನೋಡುತ್ತಾರೆ” ಎನ್ನುವ ಭರವಸೆಯನ್ನು ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.
___






Be the first to comment