ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಪುಷ್ಪ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಅವರು ಕನ್ನಡದಲ್ಲಿ ಡಬ್ ಮಾಡದೆ ಇರುವ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಡಿಸೆಂಬರ್ 9ರಂದು ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ‘ಆರ್ಆರ್ಆರ್’ ಚಿತ್ರದ ಕನ್ನಡ ಅವತರಣಿಕೆಗೆ ಜ್ಯೂ.ಎನ್ಟಿಆರ್, ರಾಮ್ ಚರಣ್ ಅವರೇ ಡಬ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದ ಕನ್ನಡ ಅವತರಣಿಕೆಯಲ್ಲಿ ರಶ್ಮಿಕಾ ಮಂದಣ್ಣ ಯಾಕೆ ಡಬ್ ಮಾಡಿಲ್ಲ ಎಂದು ಸಿನಿಪ್ರಿಯರು ಪ್ರಶ್ನಿಸಿದ್ದಾರೆ.
ಜ್ಯೂ.ಎನ್ಟಿಆರ್ ಪರಭಾಷೆ ಕಲಾವಿದ ಆದರೂ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಪರಭಾಷೆಯವರು ಕಷ್ಟವಾದರೂ ಆದಷ್ಟು ಪ್ರಯತ್ನಿಸಿ ಕನ್ನಡ ಮಾತನಾಡುತ್ತಿದ್ದಾರೆ. ಆದರೆ ಕರ್ನಾಟಕದವರಾಗಿ ಕನ್ನಡ ಅವತರಣಿಕೆಯನ್ನು ರಶ್ಮಿಕಾ ಡಬ್ ಮಾಡುವುದಿಲ್ಲ ಎಂದರೆ ಅದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ರಶ್ಮಿಕಾ ಕಡೆಯಿಂದ ಉತ್ತರ ಸಿಗಬೇಕಿದೆ. ಅವರು ಈ ಪ್ರಶ್ನೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಜ್ಯೂ.ಎನ್ಟಿಆರ್ ಅವರು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕನ್ನಡದಲ್ಲೇ ಮಾತನಾಡಿದ್ದರು. ಈ ವೇಳೆ ಅವರು ತಮ್ಮ ತಾಯಿ ಕುಂದಾಪುರದವರು ಎಂದು ಹೇಳಿದ್ದರು. ಅಲ್ಲದೇ ಡಬ್ ಮಾಡುವಾಗ ಸರಿಯಾಗಿ ಕನ್ನಡ ಮಾತನಾಡುವಂತೆ ಸೂಚಿಸಿದ್ದರು ಎಂದು ಜ್ಯೂ.ಎನ್ಟಿಆರ್ ಹೇಳಿದ್ದರು.
ಈ ಹಿಂದೆ ರಶ್ಮಿಕಾ ಅವರು ಕನ್ನಡ ಚಿತ್ರಗಳಲ್ಲಿ ನಟಿಸಲು ಸಮಯ ಸಾಕಾಗುವುದಿಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಉಂಟು ಮಾಡಿದ್ದರು. ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಅವರು ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಅವರು ಕೊನೆಯದಾಗಿ ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದಲ್ಲಿ ನಟಿಸಿದ್ದರು.
ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ‘ಪುಷ್ಪ’ ಚಿತ್ರಕ್ಕೆ ಸುಕುಮಾರ್ ಅವರ ನಿರ್ದೇಶನವಿದೆ. ಡಾಲಿ ಧನಂಜಯ್, ಫಹಾದ್ ಫಾಸಿಲ್, ಜಗಪತಿ ಬಾಬು ಪ್ರಕಾಶ್ ರಾಜ್ ಮುಂತಾದ ಸ್ಟಾರ್ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಎರಡು ಭಾಗಗಳಲ್ಲಿ ಈ ಚಿತ್ರ ತಯಾರಾಗಿದ್ದು, ಡಿ.17ರಂದು ಮೊದಲ ಭಾಗ ಮಾತ್ರ ಬಿಡುಗಡೆ ಆಗುತ್ತಿದೆ.
__
Be the first to comment