ಬಾಲಿವುಡ್ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆ ವಿಡಿಯೋ ಪ್ರಸಾರದ ಹಕ್ಕು 100 ಕೋಟಿ ರೂಪಾಯಿಗಳಿಗೆ ಅಮೆಜಾನ್ ಪ್ರೈಮ್ ಗೆ ಮಾರಾಟ ಆಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಹಸೆಮಣೆ ಏರುತ್ತಿರುವ ಜೋಡಿ ಒಪ್ಪಂದ ಮಾಡಿಕೊಂಡಿದೆ. ತಮ್ಮ ವಿವಾಹದ ಮೂಲಕ ಈ ಜೋಡಿ ಕೋಟಿ ರೂಪಾಯಿ ಲಾಭ ಮಾಡಿಕೊಳ್ಳಲು ಮುಂದಾಗಿದೆ. ಸ್ಟಾರ್ ನಟರ ಸಿನಿಮಾಗಳಿಗೆ ನೀಡುವ ಹಣಕ್ಕಿಂತಲೂ ಹೆಚ್ಚಿನ ಸಂಭಾವನೆಯನ್ನು ಈ ಜೋಡಿಯ ಮದುವೆಗೆ ಅಮೆಜಾನ್ ಪ್ರೈಂ ನೀಡಿದೆ.
ಕತ್ರಿಕಾ ಕೈಫ್ ಹಾಗೂ ವಿಕ್ಕಿ ಕೌಶಲ್ ತಮ್ಮ ಮದುವೆಗೆ 20 ಕೋಟಿ ರೂಪಾಯಿ ಮೀರಿ ಖರ್ಚು ಮಾಡಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಮೊದಲ ಬಾರಿಗೆ ಸ್ಟ್ಯಾಂಡ್‌ಅಪ್ ಕಾಮಿಡಿಯನ್ನು ಒಟಿಟಿಯಲ್ಲಿ ಬಿತ್ತರಿಸಿದ್ದ ಅಮೆಜಾನ್ ಪ್ರೈಮ್ ಈಗ ತಾರಾ ಜೋಡಿಯ ಮದುವೆಯನ್ನು ಬಿತ್ತರಿಸಲು ಮುಂದಾಗಿದೆ.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರಾಜಸ್ಥಾನದ ಸವಾಯಿ ಮಾಧೋಪುರ್‌ನ ಸಿಕ್ಸ್ ಸೆನ್ಸ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ವಿವಾಹವಾಗುತ್ತಿದ್ದಾರೆ. ಇದನ್ನು ಬರ್ವರಾ ಕೋಟೆ ಎಂದೂ ಕರೆಯಲಾಗುತ್ತದೆ. ಹೋಟೆಲ್‌ನ ಮುಂದೆ ಬಿಗಿ ಭದ್ರತೆ ವಿಧಿಸಲಾಗಿದೆ. ಅತಿಥಿಗಳ ಹೊರತಾಗಿ ಇನ್ಯಾರಿಗೂ ಪ್ರವೇಶ ನೀಡುತ್ತಿಲ್ಲ. ಅತಿಥಿಗಳಿಗೂ ಹಲವು ನಿಬಂಧನೆಗಳನ್ನು ವಿಧಿಸಲಾಗಿದೆ. ಒಪ್ಪಂದದ ಪ್ರಕಾರ ಮದುವೆ ಬಗ್ಗೆ ಯಾವುದೇ ವಿವರಗಳು ಮೊದಲೇ ಲೀಕ್ ಆಗುವಂತಿಲ್ಲ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಸೀಕ್ರೆಟ್ ಆಗಿ ಹಸೆಮಣೆ ಏರುತ್ತಿದ್ದಾರೆ. ಮದುವೆ ಮಂಟಪಕ್ಕೆ ಬರುವಾಗ ಕತ್ರಿನಾ ಕೈಫ್ ಯಾವ ಬಟ್ಟೆ ಧರಿಸುತ್ತಾರೆ ಎಂಬುದರ ಬಗ್ಗೆಯೂ ರಹಸ್ಯ ಕಾಪಾಡಿಕೊಳ್ಳಲಾಗಿದೆ. ಹಲವು ಬಗೆಯ ಕಾಸ್ಟ್ಯೂಮ್ಗಳು ಈ ಮೊದಲೇ ವಿಕ್ಕಿ ಕೌಶಲ್ -ಕತ್ರಿನಾ ಕೈಫ್ ಮನೆ ತಲುಪಿವೆ. ಆದರೆ ಅವರು ಯಾವುದನ್ನು ಆಯ್ಕೆ ಮಾಡುತ್ತಾರೆ ಎನ್ನುವುದು ಗುಟ್ಟಾಗಿದೆ. ಈ ಬಗ್ಗೆ ಡಿಸೈನರ್ಗಳಿಗೂ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ.
ವಿವಾಹ ನಡೆಯುವ ಸ್ಥಳಕ್ಕೆ ಆಗಮಿಸುವ ಅತಿಥಿಗಳು ಮೊಬೈಲ್ ತರುವಂತಿಲ್ಲ. ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿಯುವಂತಿಲ್ಲ. ಮದುವೆ ನಡೆಯುವ ಹೋಟೆಲ್ ಸುತ್ತಮುತ್ತ ಯಾವುದೇ ಡ್ರೋನ್ಗಳು ಹಾರಾಟ ನಡೆಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ಒಂದು ವೇಳೆ ಡ್ರೋನ್ ಕಂಡುಬಂದರೆ ಅದನ್ನು ಶೂಟ್ ಮಾಡಿ ಹೊಡೆದುರುಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಜಗಮಗಿಸುವ ಗಾಜಿನ ಮಂಟಪದಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವರ ವಿಕ್ಕಿ ಕಕೌಶಲ್ 7 ಬಿಳಿ ಕುದುರೆಗಳ ಜೊತೆ ಮಂಟಪಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಾಲಿವುಡ್ ಜೋಡಿಯ ಮದುವೆ ಡಿ.9ರಂದು ನಡೆಯಲಿದೆ. ವಿವಾಹಕ್ಕೆ 120 ಜನರನ್ನು ಮಾತ್ರ ಆಹ್ವಾನಿಸಲಾಗಿದೆ. ಕರಣ್ ಜೋಹರ್, ಸಲ್ಮಾನ್ ಖಾನ್ ಸೇರಿದಂತೆ ಒಟ್ಟು 120 ಮಂದಿಗೆ ಮಾತ್ರ ಮದುವೆಯಲ್ಲಿ ಭಾಗವಹಿಸಲು ಆಮಂತ್ರಣ ನೀಡಲಾಗಿದೆ.
___
Be the first to comment