ಲೂಸ್ ಮಾದ ಖ್ಯಾತಿಯ ಯೋಗಿ ನಟನೆಯ ಚಿತ್ರ ‘ ಲಂಕೆ ‘ ಶತ ದಿನದತ್ತ ಮುನ್ನುಗ್ಗಿದೆ.
ಯೋಗಿ ಜೊತೆಗೆ ಕಾವ್ಯ ಶೆಟ್ಟಿ, ಕೃಷಿ ತಾಪಂಡ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ 100 ದಿನದತ್ತ ಮುನ್ನುಗ್ಗಿರುವುದು ಚಿತ್ರತಂಡದಲ್ಲಿ ಹೊಸ ಹುಮ್ಮಸ್ಸನ್ನು ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಶತದಿನೋತ್ಸವ ಸಮಾರಂಭವನ್ನು ಗ್ರ್ಯಾಂಡ್ ಆಗಿ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ತಯಾರಿ ನಡೆಸಿದೆ.
‘ಲಂಕೆ’ ಚಿತ್ರದಲ್ಲಿ ಲೈಂಗಿಕ ಕೆಲಸಗಾರರ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ಹೀರೋ ಹೋರಾಡುವ ಕಥೆ ಇದೆ. ಆಕ್ಷನ್ ಪ್ರಕಾರದ ಈ ಸಿನೆಮಾ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮಾಸ್ ಎಂಟರ್‌ಟೇನ್‌ಮೆಂಟ್ ಆಗಿರುವ ಈ ಚಿತ್ರದಲ್ಲಿ ಮೆಸೇಜ್ ನೀಡುವ ಯತ್ನ ಮಾಡಲಾಗಿತ್ತು ಎಂದು ‘ಲಂಕೆ’ ಸಿನಿಮಾ ನಿರ್ದೇಶಕ ರಾಮ್ ಪ್ರಸಾದ್ ಎಂ. ಡಿ. ಹೇಳಿದ್ದಾರೆ.
ಲಂಕೆ ಚಿತ್ರವನ್ನು ಬೆಂಗಳೂರು, ಸಂಗಮ ಫಾರೆಸ್ಟ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಕೆಲ ತಿಂಗಳ ಹಿಂದೆ ನಿಧನ ಹೊಂದಿದ ಸಂಚಾರಿ ವಿಜಯ್ ಅವರೂ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ನೀಡಿದ್ದರು. ಚಿತ್ರವನ್ನು ಶ್ರೀನಿವಾಸ್ ನಾಗವಾರ, ಶ್ರೀಮತಿ ಸುರೇಖಾ ರಾಮ್ ಪ್ರಸಾದ್ ನಿರ್ಮಾಣ ಮಾಡಿದ್ದಾರೆ.
ಲಂಕೆ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಿರ್ದೇಶಕ ರಾಮ್ ಪ್ರಸಾದ್ ಅವರು ಎರಡನೇ ಚಿತ್ರವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದಾರೆ. ಹೊಸ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಅವರುಬ್ಸ್ಟಾರ್ ನಟರ ಜೊತೆ ಮಾತುಕತೆ ನಡೆಸಿದ್ದಾರೆ.
” ಚಿತ್ರವನ್ನು ಕನ್ನಡ ಹಾಗೂ ತೆಲುಗಿನಲ್ಲಿ ಚಿತ್ರೀಕರಣ ಮಾಡಲಾಗುವುದು. ಬಳಿಕ ಹಿಂದಿ, ತಮಿಳು ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾಗುವುದು. ಈ ಚಿತ್ರದಲ್ಲಿ ಏಳು ಜನ ನಾಯಕಿಯರಿದ್ದು ಒಂದೊಂದು ಭಾಷೆಯಿಂದ ಒಬ್ಬ ನಟಿ ನಾಯಕಿಯಾಗಿ ಅಭಿನಯಿಸಲಿದ್ದಾರೆ. ತೆಲುಗು, ತಮಿಳು ಹಾಗೂ ಬಾಲಿವುಡ್ ನಾಯಕಿಯರ ಜೊತೆ ಮಾತುಕತೆ ನಡೆಸಲಾಗುತ್ತಿದೆ” ಎಂದು ರಾಮ್ ಪ್ರಸಾದ್ ಹೇಳಿದ್ದಾರೆ.
” ಈ ಚಿತ್ರ ದೊಡ್ಡ ಪ್ರಮಾಣದಲ್ಲಿ ನಿರ್ಮಾಣವಾಗುತ್ತಿರುವ ಮಲ್ಟಿಸ್ಟಾರ್ ಸಿನಿಮಾ ಆಗಿದ್ದು ಕನ್ನಡ ಮತ್ತು ತೆಲುಗು ಚಿತ್ರರಂಗದ ಇಬ್ಬರು ಸ್ಟಾರ್ ಹೀರೋಗಳು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಮುಂದಿನ ವರ್ಷದ ಜನವರಿ 20ರ ನಂತರ ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನಡೆಸುವ ಯೋಜನೆ ಇದೆ” ಎಂದು ನಿರ್ಮಾಪಕ ರಾಮ್ ಪ್ರಸಾದ್ ಹೇಳಿದ್ದಾರೆ.
____
Be the first to comment