ನಟ ಪುನೀತ್ ರಾಜ್ ಕುಮಾರ್ ಅವರ ಕನಸಾದ ‘ವೈಲ್ಡ್ ಕರ್ನಾಟಕ’ ಡಾಕ್ಯುಮೆಂಟರಿಯ ಬಿಡುಗಡೆಗೆ ಅಶ್ವಿನಿ ಪುನೀತ್ ರಾಜ್ಕುಮಾರ್ ಮುಂದಾಗಿದ್ದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
“ಅಪ್ಪು ಅವರ ಕನಸೊಂದು 11- 11- 2021ರಂದು ಬೆಳಕು ಕಾಣಬೇಕಿತ್ತು. ಆದರೆ ಈ ಕನಸಿಗಿದು ಅಲ್ಪವಿರಾಮವಷ್ಟೇ. ಅದನ್ನು ಅವರಿಷ್ಟದಂತೆ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು. ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ” ಎಂದು ಟ್ವೀಟ್ ಮಾಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರು ಅಮೋಘ ವರ್ಷ ಅವರ ಜೊತೆ ಸೇರಿ ‘ವೈಲ್ಡ್ ಕರ್ನಾಟಕ’ ಎಂಬ ಡಾಕ್ಯುಮೆಂಟರಿ ಸಿದ್ದಪಡಿಸಿದ್ದರು. ಅದಕ್ಕೆ ಗಂಧದ ಗುಡಿ ಎಂದು ಹೆಸರನ್ನು ಕೂಡ ಇಟ್ಟಿದ್ದರು. ಇದನ್ನು ರಾಜ್ಯದ ಹಲವು ಸ್ಥಳಗಳಲ್ಲಿ ಶೂಟ್ ಮಾಡಲಾಗಿತ್ತು. ಇದರಲ್ಲಿ ಪುನೀತ್ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಳೆದ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾಕ್ಯುಮೆಂಟರಿಯ ಟೀಸರ್ ಬಿಡುಗಡೆ ಮಾಡಬೇಕಿತ್ತು.
ಪವರ್ ಸ್ಟಾರ್ ಪುನೀತ್ ರಾಜ್ಕಕುಮಾರ್ ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನರಾದರು. ಈ ಮುನ್ನ ಅವರು, ” ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ. ನವೆಂಬರ್ 1ಕ್ಕಾಗಿ ಕಾಯಿರಿ’ ಎಂದು ಪೋಸ್ಟ್ ಮಾಡಿದ್ದರು.
ಈಗ ‘ವೈಲ್ಡ್ ಕರ್ನಾಟಕ’ ಡಾಕ್ಯುಮೆಂಟರಿ ಬಿಡುಗಡೆ ಬಗ್ಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
___
Be the first to comment