ಜಮಾಲಿಗುಡ್ಡದಲ್ಲಿ ಡಾಲಿ

ಡಾಲಿ ಧನಂಜಯ ಅವರು ಮತ್ತೊಂದು ಹೊಸ ಸಿನಿಮಾ ಪ್ರಕಟಿಸಿದ್ದು ಚಿತ್ರದ ಪೋಸ್ಟರ್ ಮೂಲಕ ಗಮನ ಸೆಳೆದಿದ್ದಾರೆ.

‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಹೆಸರಿನ ಸಿನಿಮಾದಲ್ಲಿ ಧನಂಜಯ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಿನಿಮಾದ ಟೈಟಲ್​ ಪೋಸ್ಟರ್​ ರಿಲೀಸ್​ ಆಗಿದ್ದು ಸಿನಿಪ್ರಿಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಪೋಸ್ಟರ್ ನಲ್ಲಿ ಧನಂಜಯ ಅವರು ಪುಟ್ಟ ಮಗುವಿನ ಜೊತೆ ಗುಡ್ಡ ಒಂದನ್ನು ನೋಡುತ್ತಾ ಕುಳಿತಿರುವ ದೃಶ್ಯ ಇದೆ.

ಕುಶಾಲ್ ಗೌಡ ಅವರು ಚಿತ್ರದ ನಿರ್ದೇಶಕ ಆಗಿದ್ದು, ಸಿನಿಮಾ ಸಸ್ಪೆನ್ಸ್ ಕಥೆ ಹೊಂದಿದೆ ಎಂದು ಹೇಳಲಾಗಿದೆ. ಚಿತ್ರವನ್ನು ಶ್ರೀ ಹರಿ ಅವರು ನಿರ್ಮಿಸುತ್ತಿದ್ದಾರೆ. ಧನಂಜಯ್​ ಅವರ ಜೊತೆಗೆ ಆದಿತಿ ಪ್ರಭುದೇವ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಸಿನಿಮಾದ ಕಥೆ ಕೇಳಿದ ಧನಂಜಯ್​ ಅವರಿಗೆ ಭಯವಾಗಿತ್ತು. ಆದರೆ ಈ ಪಾತ್ರವನ್ನು ಧನಂಜಯ ಅವರು ಮಾತ್ರ ಮಾಡಬಹುದು ಅಂತ ನಿರ್ದೇಶಕರಿಗೆ ಅನಿಸಿದ ಕಾರಣಕ್ಕೆ ಧನಂಜಯ್​ ಅವರ ಮನವೊಲಿಸಿ ಪ್ರಮುಖ ಪಾತ್ರದಲ್ಲಿ ನಟಿಸುವಂತೆ ಕೇಳಿಕೊಳ್ಳಲಾಯಿತು ಎಂದು ಚಿತ್ರತಂಡ ಹೇಳಿದೆ.

ನಿರ್ದೇಶಕ ಕುಶಾಲ್ ಗೌಡ ಅವರು ಈ ಹಿಂದೆ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಸಿನಿಮಾ ನಿರ್ದೇಶನ ಮಾಡಿದ್ದರು. ಈಗ ಸಸ್ಪೆನ್ಸ್ ಕತೆಯ ಮೂಲಕ ಬೆಳ್ಳಿತೆರೆಯ ಮೇಲೆ ಬರಲು ಸಿದ್ಧತೆ ನಡೆಸಿದ್ದಾರೆ. ಈ ಸಿನಿಮಾಗೆ ಅರ್ಜುನ್​ ಜನ್ಯ ಅವರ ಸಂಗೀತ ಇದೆ. ಕಳೆದ ಎರಡು ತಿಂಗಳಿನಿಂದ ಚಿತ್ರತಂಡ ಶೂಟಿಂಗ್​ನಲ್ಲಿ ನಿರತವಾಗಿದೆ.

ಅಮೆಜಾನ್​ ಪ್ರೈಂನಲ್ಲಿ ರಿಲೀಸ್​ ಆದ “ರತ್ನನ್​ ಪ್ರಪಂಚ” ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಧನಂಜಯ್ ಅವರು ಈ ಸಿನೆಮಾದ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!