ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಚಿತ್ರ ಡಿ.24ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ಅವರ ಕನ್ನಡದ ಮೊದಲ ಕಮರ್ಷಿಯಲ್ ಚಿತ್ರ ಆಗಿರುವ ರೈಡರ್ ಡಿಸೆಂಬರ್ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಘೋಷಣೆ ಮಾಡಿದೆ.
ಈ ಸಿನಿಮಾದಲ್ಲಿ ನಿಖಿಲ್ ಕುಮಾರ್, ಕಶ್ಮೀರ ಪರದೇಶಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಲಹರಿ ಪ್ರೊಡಕ್ಷನ್ಸ್ ಹಾಗೂ ಶಿವನಂದಿ ಎಂಟ್ರೈನ್ಮೆಂಟ್ಸ್ ನಿರ್ಮಾಣ ಮಾಡಿವೆ.
ಚಿತ್ರದಲ್ಲಿ ನಿಖಿಲ್ ಅವರು ಬ್ಯಾಸ್ಕೆಟ್ಬಾಲ್ ಆಟಗಾರನ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಶ್ರೀಶ ಕೂದುವಳ್ಳಿ ಅವರ ಛಾಯಾಗ್ರಹಣವಿದೆ. ಸಂಪದ, ದತ್ತಣ್ಣ, ಅಚ್ಯುತ್ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ತಾರಾಗಣದಲ್ಲಿದ್ದಾರೆ.
ಕನ್ನಡದ ಜೊತೆಗೆ ತೆಲುಗಿನಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ನಿಖಿಲ್ ನಟನೆಯ ಮೊದಲ ಸಿನಿಮಾ ಜಾಗ್ವಾರ್ ಕನ್ನಡ-ತೆಲುಗು ಭಾಷೆಯಲ್ಲಿ ತೆರೆಗೆ ಬಂದಿತ್ತು. ಬಳಿಕ ಬಂದ ‘ಕುರುಕ್ಷೇತ್ರ’ ಚಿತ್ರ ಬಹುಭಾಷೆಗಳಲ್ಲಿ ತೆರೆಕಂಡಿತ್ತು. ಈಗ ‘ರೈಡರ್’ ಮೂಲಕ ಮತ್ತೊಮ್ಮೆ ಬಹುಭಾಷಾ ಸಿನಿಮಾಕ್ಕೆ ನಿಖಿಲ್ ಕುಮಾರಸ್ವಾಮಿ ಕೈ ಹಾಕಿದ್ದಾರೆ.
ಈಗಾಗಲೇ ‘ರೈಡರ್’ ಚಿತ್ರದ ಡಬ್ಬಿಂಗ್ ಕೆಲಸ ಮುಗಿಸಿದೆ. ಸಿನಿಮಾವನ್ನು ಮೈಸೂರು, ಮಂಗಳೂರು, ಬೆಂಗಳೂರು, ಶಿರಸಿ ಅಲ್ಲದೇ ಲೇಹ್ ಲಡಾಖ್ನಲ್ಲಿ ಚಿತ್ರೀಕರಣ ಮಾಡಲಾಗಿದೆ.
ನಿಖಿಲ್ ಅವರು ಚಿತ್ರದಲ್ಲಿ ಬಾಸ್ಕೆಟ್ ಬಾಲ್ ಆಟಗಾರನಾಗಿ ಕಾಣಿಸಿಕೊಳ್ಳಲು ಮೂರು ತಿಂಗಳ ಕಾಲ ತರಬೇತಿ ಪಡೆದುಕೊಂಡಿದ್ದಾರೆ. ಎಲ್ಲರಿಗೂ ಹೆಚ್ಚು ಪರಿಚಿತವಾಗಿರುವ ಕ್ರೀಡೆ ಬಗ್ಗೆ ಹೇಳುವುದಕ್ಕಿಂತ, ಅಷ್ಟಾಗಿ ಗೊತ್ತಿಲ್ಲದಿರುವ ಕ್ರೀಡೆ ಬಗ್ಗೆ ಹೇಳಿದರೆ ಜನ ಇಷ್ಟಪಡುತ್ತಾರೆ ಎನ್ನುವ ಕಾರಣಕ್ಕೆ ಬಾಸ್ಕೆಟ್ ಬಾಲ್ ಕ್ರೀಡೆಯ ಕಥೆಯನ್ನು ಮಾಡಲಾಗಿದೆ ಎಂದು ನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದಾರೆ.
Be the first to comment