ಮೊಬೈಲ್ ಅಡಿಕ್ಷನ್ ತರುವ ಅನಾಹುತಗಳ ಬಗ್ಗೆ ಬೆಳಕು ಚೆಲ್ಲುವ 100 ಚಿತ್ರ ನವೆಂಬರ್ 19ರಂದು ತೆರೆಗೆ ಬರುತ್ತಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟು ಹಾಕಿದೆ.
ಮೊಬೈಲ್ ನಿಂದ ಆಗುವ ಸಮಸ್ಯೆಗಳ ಕುರಿತು ಯಾರೂ ಊಹಿಸಲಾಗದ ಕಂಟೆಂಟಿನೊಂದಿಗೆ ರಮೇಶ್ ಅರವಿಂದ್ ಅವರು ನಿರ್ದೇಶನದ ಜೊತೆ ನಾಯಕನಾಗಿಯೂ ನಟಿಸಿರುವ ಚಿತ್ರ 100 ತೆರೆಗೆ ಬರುತ್ತಿದೆ. ಸಾಮಾಜಿಕ ಜಾಲತಾಣದ ಮತ್ತೊಂದು ಕರಾಳ ಮುಖವನ್ನು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ 100 ಚಿತ್ರದ ಮೂಲಕ ಕಟ್ಟಿ ಕೊಡುವ ಯತ್ನವನ್ನು ರಮೇಶ್ ಮಾಡಿದ್ದಾರೆ.
ಅಮ್ಮ, ಹೆಂಡತಿ, ತಂಗಿ ಮತ್ತು ಮುದ್ದಾದ ಹೆಣ್ಣು ಮಗುವಿನ ಕುಟುಂಬದ ಜವಾಬ್ದಾರಿ ಹೊತ್ತಿರುವ ವ್ಯಕ್ತಿಯಾಗಿ, ಸಮಾಜವನ್ನು ಕಾಪಾಡುವ ಪೊಲೀಸ್ ಅಧಿಕಾರಿಯಾಗಿ, ವೃತ್ತಿ ಮತ್ತು ಜವಾಬ್ದಾರಿಯ ನಡುವೆ ಸಿಲುಕುವ ನಾಯಕನ ತೊಳಲಾಟದ ಕಥೆಯನ್ನು ಥ್ರಿಲ್ಲರ್ ಮಾದರಿಯಲ್ಲಿ ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.
ಚಿತ್ರದಲ್ಲಿ ಫ್ಯಾಮಿಲಿ ಸಬ್ಜೆಕ್ಟ್ ಮತ್ತು ಥ್ರಿಲ್ಲರ್ ಕಥನ ಒಂದಕ್ಕೊಂದು ಪೂರಕವಾಗಿ ಸಾಗುತ್ತವೆ ಕಥೆ ಹೆಣೆಯಲಾಗಿದೆ. ಸಿನಿಮಾದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಗ್ಗೆ ಪ್ರಧಾನವಾಗಿ ಗಮನ ಹರಿಸಲಾಗಿದೆ. ಸಾಮಾಜಿಕ ಜಾಲತಾಣಗಳು ಎಲ್ಲರ ಬದುಕಿನಲ್ಲಿಎಂಟ್ರಿಯಾಗಿ ಸೃಷ್ಟಿಸಿದ ಅನಾಹುತಗಳ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಸ್ವಲ್ಪ ಯಾಮಾರಿದರೂ ಕುಟುಂಬದ ನೆಮ್ಮದಿಯೇ ನಾಶವಾಗುವ ಅನಾಹುತಗಳು ಸೋಶಿಯಲ್ ಮೀಡಿಯಾದಿಂದಾಗುತ್ತಿವೆ. ಇಂತಹ ಘಟನೆಗಳ ಸುತ್ತ ಹೆಣೆಯಲಾದ ಕಥೆ 100 ಸಿನಿಮಾದಲ್ಲಿದ್ದು ಇದು ಜನರನ್ನು ಅಲರ್ಟ್ ಆಗಿಸುವಂತಿದೆಯಂತೆ ಎಂದು ನಿರ್ದೇಶಕ ರಮೇಶ್ ಹೇಳಿದ್ದಾರೆ.
ಸೂರಜ್ ಪ್ರೊಡಕ್ಷನ್ಸ್ ನಲ್ಲಿ ಎಂ.ರಮೇಶ್ ರೆಡ್ಡಿ, ಉಮಾ ನಿರ್ಮಾಪಕರಾಗಿರುವ 100 ಚಿತ್ರದಲ್ಲಿ ರಮೇಶ್ ಅರವಿಂದ್ ಅಲ್ಲದೇ, ಪೂರ್ಣ, ರಚಿತಾ ರಾಮ್, ರಾಜು ತಾಳಿಕೋಟೆ, ಬೇಬಿ ಸ್ಮಯಾ, ವಿಶ್ವಕರ್ಣ, ಪ್ರಕಾಶ್ ಬೆಳವಾಡಿ, ಮಾಲತಿ ಸುಧೀರ್, ಮತ್ತಿತರರು ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸತ್ಯ ಹೆಗಡೆ ಕ್ಯಾಮೆರಾ, ಶ್ರೀನಿವಾಸ್ ಕಲಾಲ್ ಸಂಕಲನ, ಧನಂಜಯ ನೃತ್ಯ ಸಂಯೋಜನೆ, ಗುರು ಕಶ್ಯಪ್ ಸಂಭಾಷಣೆ ಈ ಚಿತ್ರಕ್ಕಿದೆ. ಜಾಲಿ ಬಾಸ್ಟಿನ್, ರವಿವರ್ಮ ಆಕ್ಷನ್ ಸೀನ್ ಕಂಪೋಸ್ ಮಾಡಿದ್ದಾರೆ.
__
Be the first to comment