ನೇತ್ರದಾನದ ಬಗ್ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹರ್ಷ

ಪುನೀತ್ ರಾಜ್ ಕುಮಾರ್ ಅವರ ಹಾದಿಯಲ್ಲಿ ಸಾರ್ವಜನಿಕರು ನೇತ್ರದಾನಕ್ಕೆ ನೋಂದಣಿ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಪತ್ರವೊಂದನ್ನು ಹಂಚಿಕೊಂಡಿದ್ದಾರೆ.

‘ಪುನೀತ್ ರಾಜ್‌ಕುಮಾರ್ ಅಕಾಲಿಕ ಅಗಲಿಕೆ ನಮಗಷ್ಟೆ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ನಿಷ್ಕಲ್ಮಷ ಪ್ರೀತಿಯಿಂದ, ಅಕ್ಕರೆಯ ಅಭಿಮಾನದಿಂದ ಅವರನ್ನು ಪವರ್ ಸ್ಟಾರ್ ಆಗಿ ರೂಪಿಸಿದ್ದ ನಿಮ್ಮೆಲ್ಲರಿಗೂ ಅವರ ವಿದಾಯ ತಂದಿತ್ತ ದುಃಖ ಎಷ್ಟಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಆದರೂ ಇಂಥಹಾ ಸಂದರ್ಭದಲ್ಲಿ ನೀವುಗಳು ಎಲ್ಲಿಯೂ ಸಂಯಮ ಕಳೆದುಕೊಳ್ಳದೆ ಅಹಿತಕರ ಘಟನೆಗಳು ನಡೆಯಲು ಬಿಡದೆ ಅವರಿಗೊಂದು ಗೌರವಯುತ ಬೀಳ್ಕೊಡುಗೆ ನೀಡುವಲ್ಲಿ ಸಹಕರಿಸಿದ್ದೀರಿ. ಸಿನಿಮಾ ಪ್ರೇಮಿಗಳು ಮಾತ್ರವೇ ಅಲ್ಲದೆ ವಯೋಮಾನದ ಮಿತಿ ಇಲ್ಲದೆ ದೇಶ-ವಿದೇಶಗಳಿಂದ ಕೋಟ್ಯಂತರ ಜನರು ಸಂತಾಪ ಸೂಚಿಸುವುದನ್ನು ಕಂಡಾಗ ಮನಸ್ಸು ಭಾರವಾಗುತ್ತದೆ. ನಿಮ್ಮ ಪ್ರೀತಿಯ ಅಪ್ಪು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಕೋಟ್ಯಂತರ ಜನ ನೇತ್ರದಾನಕ್ಕೆ ನೊಂದಣಿ ಮಾಡಿರುವುದು ನೋಡಿದಾಗ ಕಣ್ಣು ತುಂಬಿ ಬರುತ್ತದೆ. ಅವರನ್ನು ಆದರ್ಶವನ್ನಾಗಿಟ್ಟುಕೊಂಡು ನೀವುಗಳು ಮಾಡುವ ಸತ್ಕಾರ್ಯದಲ್ಲಿ ಅವರ ನೆನಪುಗಳು ನಿಮ್ಮಲ್ಲಿ ಮೂಡಿಸುವ ಉತ್ಸಾಹದಲ್ಲಿ ಅವರೆಂದೂ ಜೀವಂತವಾಗಿರುತ್ತಾರೆ. ವಿಶ್ವದಾದ್ಯಂತ ನಮ್ಮ ಶೋಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳಿಗೆ ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು” ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪತ್ರದಲ್ಲಿ ಹೇಳಿದ್ದಾರೆ.

ಪುನೀತ್ ಅವರ ಎರಡು ಕಣ್ಣುಗಳಲ್ಲಿ ಈಗಾಗಲೇ ನಾಲ್ಕು ಮಂದಿಗೆ ಅಳವಡಿಸಲಾಗಿದೆ. ಈಗ ಅವರ ಉಳಿದ ಕಣ್ಣಿನ ಅಂಗಾಂಗಗಳನ್ನು 10ಕ್ಕೂ ಹೆಚ್ಚು ಮಂದಿಗೆ ಅಳವಡಿಸಲು ನಾರಾಯಣ ನೇತ್ರಾಲಯದ ತಜ್ಞ ವೈದ್ಯರು ಮುಂದಾಗಿದ್ದಾರೆ.

ನಟ ಪುನೀತ್ ರಾಜ್​ಕುಮಾರ್ ಅವರ ಸ್ಪೂರ್ತಿಯಿಂದ ರಾಜ್ಯದಲ್ಲಿ ನೇತ್ರದಾನ ಪ್ರಮಾಣ ಹೆಚ್ಚಾಗಿದೆ. ಪುನೀತ್ ನೇತ್ರದಾನದ ಬಳಿಕ ಇದುವರೆಗೂ 6 ಸಾವಿರಕ್ಕೂ ಹೆಚ್ಚು ಮಂದಿ ನೇತ್ರದಾನ ಮಾಡಲು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇಷ್ಟೊಂದು ಮಂದಿ ನೇತ್ರದಾನ ಮಾಡಲು ಮುಂದೆ ಬಂದಿರುವುದು ಮೊದಲು ಎಂದು ಹೇಳಲಾಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!