ಅಪ್ಪು ಸ್ಪೂರ್ತಿಯಿಂದ ಹೆಚ್ಚಿದ ನೇತ್ರದಾನ ನೋಂದಣಿ

ನಟ ಪುನೀತ್ ರಾಜ್​ಕುಮಾರ್ ಅವರ ಸ್ಪೂರ್ತಿಯಿಂದ ರಾಜ್ಯದಲ್ಲಿ ನೇತ್ರದಾನ ಪ್ರಮಾಣ ಹೆಚ್ಚಾಗಿದೆ.

ಪುನೀತ್ ನೇತ್ರದಾನದ ಬಳಿಕ ಇದುವರೆಗೂ 6 ಸಾವಿರಕ್ಕೂ ಹೆಚ್ಚು ಮಂದಿ ನೇತ್ರದಾನ ಮಾಡಲು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇಷ್ಟೊಂದು ಮಂದಿ ನೇತ್ರದಾನ ಮಾಡಲು ಮುಂದೆ ಬಂದಿರುವುದು ಮೊದಲು ಎಂದು ಹೇಳಲಾಗಿದೆ.

ಇದೇ ವೇಳೆ ಪುನೀತ್ ರಾಜ್‍ಕುಮಾರ್ ಅವರು ದಾನ ಮಾಡಿರುವ ಅವರ ಎರಡು ಕಣ್ಣುಗಳನ್ನು 10ಕ್ಕೂ ಹೆಚ್ಚು ಮಂದಿಗೆ ಬಳಕೆ ಮಾಡಿ ದೃಷ್ಟಿ ನೀಡುವ ನಿಟ್ಟಿನಲ್ಲಿ ನಾರಾಯಣ ನೇತ್ರಾಲಯ ಮುಂದಡಿ ಇಟ್ಟಿದೆ.

ಪುನೀತ್ ಅವರ ಎರಡು ಕಣ್ಣುಗಳಲ್ಲಿ ಈಗಾಗಲೇ ನಾಲ್ಕು ಮಂದಿಗೆ ಅಳವಡಿಸಲಾಗಿದೆ. ಈಗ ಅವರ ಉಳಿದ ಕಣ್ಣಿನ ಅಂಗಾಂಗಗಳನ್ನು 10ಕ್ಕೂ ಹೆಚ್ಚು ಮಂದಿಗೆ ನೀಡಲು ಕಾರ್ಯ ನಿರತರಾಗಿದ್ದೇವೆ ಎಂದು ನಾರಾಯಣ ನೇತ್ರಾಲಯದ ತಜ್ಞ ವೈದ್ಯ ಡಾ.ಯತೀಶ್ ಹೇಳಿದ್ದಾರೆ.

“ಖಚಿತವಾಗಿ ಎಷ್ಟು ಮಂದಿಗೆ ಅಪ್ಪು ಕಣ್ಣುಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಈಗಲೇ ನಿರ್ಧರಿಸಲು ಸಾಧ್ಯವಿಲ್ಲ. ಆದರೂ 10ಕ್ಕೂ ಹೆಚ್ಚು ಮಂದಿಗೆ ದೃಷ್ಟಿ ನೀಡುವತ್ತ ಗಮನ ಹರಿಸಿದ್ದೇವೆ. ಅಪ್ಪು ಕಣ್ಣಿನ ಕಪ್ಪು ಗುಡ್ಡೆಯನ್ನು ಈಗಾಗಲೇ ನಾಲ್ಕು ಮಂದಿಗೆ ಅಳವಡಿಸಲಾಗಿದೆ. ಬಿಳಿ ಗುಡ್ಡೆ ಮಧ್ಯೆ ಇರುವ ಸ್ಟೆಮ್ ಸೆಲ್ಸ್ ಅನ್ನು ಸಂರಕ್ಷಿಸಿಡಲಾಗಿದ್ದು , ಆ ಸೆಲ್ಸ್ ನ್ನು ದೃಷ್ಟಿ ಕಳೆದುಕೊಂಡಿರುವವರಿಗೆ ಅಳವಡಿಸಲು ಸಿದ್ಧತೆ ನಡೆಸಿದ್ದೇವೆ” ಎಂದಿದ್ದಾರೆ.

“ಈ ರೀತಿಯ ಪ್ರಯತ್ನ ದೇಶದಲ್ಲೇ ಮೊಟ್ಟ ಮೊದಲನೆಯದ್ದು. ಕಣ್ಣಿನ ದೃಷ್ಟಿ ಅವಶ್ಯಕತೆ ಇರುವವರನ್ನು ಡಾ.ರಾಜ್‍ಕುಮಾರ್ ಐ ಬ್ಯಾಂಕ್ ಮೂಲಕ ಪತ್ತೆ ಹಚ್ಚಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!