ಇಂದು ಪುನೀತ್ ನಮನ: ಕಾರ್ಯಕ್ರಮದಲ್ಲಿ ಏನಿರುತ್ತೆ?

ಅಕಾಲಿಕವಾಗಿ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಂದು ಫಿಲ್ಮ್ ಚೇಂಬರ್ ವತಿಯಿಂದ ಆಯೋಜನೆ ಮಾಡಲಾಗಿರುವ ‘ಪುನೀತ್ ನಮನ’ ಕಾರ್ಯಕ್ರಮ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಆರಂಭ ಆಗಲಿದೆ.

ಸಂಜೆ 6 ಗಂಟೆವರೆಗೂ ಗೀತ ನಮನ ಹಾಗೂ ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ಡಾ. ನಾಗೇಂದ್ರ ಪ್ರಸಾದ್ ಬರೆದ ಸಾಹಿತ್ಯಕ್ಕೆ ಗುರುಕಿರಣ್ ರಾಗ ಸಂಯೋಜಿಸಿದ್ದು, ಈ ಗೀತೆಯ ಮೂಲಕ ಪುನೀತ್ ನಮನ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಬಳಿಕ ಸ್ಯಾಂಡಲ್‌ವುಡ್‌ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ತಂಡ ಪುನೀತ್ ಅವರ ಹೆಜ್ಜೆ ಗುರುತನ್ನು ನೆನಪಿಸುವ ಗೀತೆಯನ್ನು ಗಣ್ಯರ ಮುಂದೆ ಪ್ರಸ್ತುತ ಪಡಿಸಲಿದೆ. ಪ್ರತಿ ನಾಲ್ಕು ಜನ ಗಣ್ಯರ ಪುಷ್ಪ ನಮನದ ಬಳಿಕ ಗುರುಕಿರಣ್‌ ಸಾರಥ್ಯದಲ್ಲಿ ಒಂದೊಂದು ಹಾಡಿನ ಗಾಯನ ನಡೆಯುತ್ತದೆ. ಸುಮಾರು 15ಕ್ಕೂ ಹೆಚ್ಚು ಹಾಡುಗಳ ಗಾಯನ ನಡೆಯಲಿದೆ.

ಡಾ. ರಾಜ್ ಕುಮಾರ್ ಕುಟುಂಬ, ಸ್ಯಾಂಡಲ್‌ವುಡ್ ಕಲಾವಿದರು ಸೇರಿದಂತೆ ಭಾರತೀಯ ಚಿತ್ರರಂಗದ ಗಣ್ಯರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ.
ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಕುಟುಂಬಕ್ಕೆ ಆಹ್ವಾನ ನೀಡಿಲಾಗಿದೆ. ರಾಜ್ ಅವರ ಹೆಣ್ಣು ಮಕ್ಕಳು, ಅಳಿಯಂದಿರು, ಮಕ್ಕಳು, ಮರಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಸ್ಯಾಂಡಲ್‌ವುಡ್‌ ಭಾಗಿ: ಕಾರ್ಯಕ್ರಮದಲ್ಲಿ ಭಾಗವಹಿಸಲು ಇಡೀ ಸ್ಯಾಂಡಲ್‌ವುಡ್‌ಗೂ ಆಹ್ವಾನ ನೀಡಲಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್, ಧ್ರುವ ಸರ್ಜಾ, ರಕ್ಷಿತ್ , ರಿಷಬ್ ಸೇರಿದಂತೆ ಸ್ಯಾಂಡಲ್‌ವುಡ್‌ನ ತಂತ್ರಜ್ಞರಿಗೆ, ಕಲಾವಿದರಿಗೆ ಆಹ್ವಾನ ನೀಡಲಾಗಿದೆ.

ಪುನೀತ್ ನಮನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಲಿದ್ದಾರೆ. ರಾಜ್ಯದ ಸಚಿವರು, ಶಾಸಕರ ಉಪಸ್ಥಿತಿಯೂ ಇರಲಿದೆ. ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷದತ್ತ ಚಾಮರಾಜ ಒಡೆಯರ್‌ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಸ್ಟಾರ್ ನಟರು ಭಾಗಿ: ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್‌, ಸೂಪರ್‌ಸ್ಟಾರ್ ರಜನಿಕಾಂತ್, ವಿಶಾಲ್, ವಿಜಯ್ ಸೇತುಪತಿ, ಮೆಗಾಸ್ಟಾರ್ ಚಿರಂಜೀವಿ, ಜ್ಯೂ. ಎನ್ ಟಿ ಆರ್, ಅಲ್ಲು ಅರ್ಜುನ್, ರಾಮ್ ಚರಣ್, ಮೋಹನ್ ಲಾಲ್, ಮಮ್ಮುಟ್ಟಿಗೆ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

ಸಾರ್ವಜನಿಕರಿಗೆ ಪ್ರವೇಶವಿಲ್ಲ: ಪುನೀತ್ ನಮನ ಕಾರ್ಯಕ್ರಮಕ್ಕೆ ಪುನೀತ್ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಹ್ವಾನ ನೀಡಲಾಗಿಲ್ಲ. ವಿವಿಧ ಚಾನಲ್‌ಗಳಲ್ಲಿ ಕಾರ್ಯಕ್ರಮದ ಲೈವ್‌ ಟೆಲಿಕಾಸ್ಟ್‌ ನಡೆಯಲಿದೆ. ಕಾರ್ಯಕ್ರಮದ ಬಳಿಕ ವಿವಿಐಪಿಗಳಿಗೆ ಪಕ್ಕದ ಎ.ಸಿ. ಹಾಲ್‌ ಹಾಗೂ ಇತರರಿಗೆ ಹೊರಭಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಹೊರ ಭಾಗದಲ್ಲಿ ಹತ್ತು ಕೌಂಟರ್‌ಗಳ ವ್ಯವಸ್ಥೆ ಇರಲಿದೆ.

ಕಾರ್ಯಕ್ರಮಕ್ಕೆ 1500 ಪಾಸ್‌ಗಳನ್ನು ಮಾತ್ರ ವಿವರಿಸಲಾಗಿದೆ. 2 ಸಾವಿರ ಮಂದಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಪಾಸ್‌ ಇದ್ದವರಿಗೆ ಮಾತ್ರ ಒಳಬಿಡಲು ಫಿಲ್ಮ್ ಚೇಂಬರ್ ಕ್ರಮ ವಹಿಸಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!