ಶಿವಮೊಗ್ಗದ ಸಕ್ರೆಬೈಲು ಬಿಡಾರದಲ್ಲಿರುವ ಮರಿ ಆನೆಯೊಂದಕ್ಕೆ ನಟ ಪುನೀತ್ ರಾಜ್ ಕುಮಾರ್ ಅವರ ನೆನಪಿನಲ್ಲಿ ಅವರ ಹೆಸರು ಇಡಲಾಗಿದೆ. “ಡಾಕ್ಯೂಮೆಂಟರಿ ಒಂದರ ಚಿತ್ರೀಕರಣಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಕ್ರೆಬೈಲು ಬಿಡಾರಕ್ಕೆ ಭೇಟಿ ನೀಡಿದ್ದರು. ಆಗ ನೇತ್ರಾವತಿಯ ಮರಿ ಜೊತೆಗೆ ಪುನೀತ್ ಕೆಲ ಹೊತ್ತು ಕಾಲ ಕಳೆದಿದ್ದರು. ಆನೆ ಮರಿಯನ್ನು ಮುದ್ದಾಡಿದ್ದರು. ಹೀಗಾಗಿ ಅವರ ಹೆಸರನ್ನೇ ಮರಿ ಆನೆಗೆ ಇಡಲಾಗಿದೆ.
ಪುನೀತ್ ರಾಜಕುಮಾರ್ ಸಕ್ರೆಬೈಲು ಬಿಡಾರಕ್ಕೆ ಬಂದು ಹೋದ ಮೇಲೆ ಎಲ್ಲರೂ ಮರಿ ಆನೆಯನ್ನು ಅಪ್ಪು ಎಂದು ಕರೆಯುತ್ತಿದ್ದರು. ಹಾಗಾಗಿ ಮರಿ ಆನೆಗೆ ಪುನೀತ್ ಎಂದೇ ನಾಮಕರಣ ಮಾಡಲಾಗಿದೆ” ಎಂದು ಡಿಎಫ್ಒ ನಾಗರಾಜ್ ತಿಳಿಸಿದ್ದಾರೆ.
ತಾಯಿ ಆನೆ ನೇತ್ರಾವತಿ ಮತ್ತು ಅದರ ಮರಿ ಪುನೀತ್ ಇನ್ನು ಮುಂದೆ ದೂರ ಉಳಿಯಬೇಕಿದೆ. ಇದುವರೆಗೆ ತಾಯಿ ಹಾಲು ಕುಡಿಯಲು ಮರಿ ಆನೆಗೆ ಅವಕಾಶವಿತ್ತು. ಆದರೆ ಇನ್ನು ಮುಂದೆ ಮರಿ ಆನೆ ಪುನೀತ್ ಸ್ವತಂತ್ರವಾಗಿ ಬದುಕುವ ಸಲುವಾಗಿ ತಾಯಿ ಮತ್ತು ಮರಿಯನ್ನು ಬೇರ್ಪಡಿಸಲಾಗಿದೆ.
ಇನ್ನು ಮುಂದೆ ತಾಯಿ ನೇತ್ರಾವತಿಯನ್ನು ಕಾಡಿನಲ್ಲಿ ಬಿಡಲಾಗುತ್ತದೆ. ಅದರ ಜೊತೆಗೆ ಬಿಡಾರದ ಕೆಲವು ಆನೆಗಳು ಇರಲಿವೆ. ಮರಿ ಆನೆ ತಾಯಿಯ ಆಸರೆ ಇಲ್ಲದೆ ಸ್ವತಂತ್ರವಾಗಿ ಬದುಕುವಂತಾದಾಗ ಮರಿ ಆನೆಗೆ ಬಿಡುಗಡೆ ಭಾಗ್ಯ ಸಿಗಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮರಿ ಆನೆ ಪುನೀತ್‌ನನ್ನು ಬಿಡಾರದಲ್ಲೇ ಇರಿಸಿಕೊಳ್ಳಲಾಗುತ್ತದೆ. ಈವರೆಗೂ ತಾಯಿ ಹಾಲು ಕುಡಿಯುವುದರ ಜೊತೆಗೆ ಪುನೀತ್‌ಗೆ ಬಿಡಾರದ ಆಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ಕೊಡಲಾಗುತ್ತಿತ್ತು. ತಾಯಿಯಿಂದ ಬೇರ್ಪಡಿಸುವ ವೀನಿಂಗ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆ ಮರಿ ಆನೆಯನ್ನು ಸಕ್ರೆಬೈಲು ಬಿಡಾರದಲ್ಲಿ ಕಟ್ಟಿ ಹಾಕಲಾಗುತ್ತದೆ. ಯಾವುದೇ ಕಾರಣಕ್ಕೂ ಮರಿ ಆನೆ ತಪ್ಪಿಸಿಕೊಂಡು ತಾಯಿಯ ಬಳಿಗೆ ಹೋಗದಂತೆ ತಡೆಯಲು ಹೀಗೆ ಮಾಡಲಾಗುತ್ತದೆ. ಇನ್ನು ಮುಂದೆ ಬಿಡಾರದಲ್ಲಿ ಪುನೀತ್ ಆನೆಗೆ ಹಾಲು ಕೊಡುವುದಿಲ್ಲ. ಬದಲಾಗಿ ಉಳಿದ ಆನೆಗಳಿಗೆ ಕೊಡುವ ಆಹಾರವನ್ನೇ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Be the first to comment