‘ಪ್ರೇಮಂ ಪೂಜ್ಯಂ’ ವೀಕ್ಷಣೆಗೆ ದರ್ಶನ್ ಮನವಿ

ಲವ್ಲಿ ಸ್ಟಾರ್ ಪ್ರೇಮ್ ನಟಿಸಿರುವ ‘ಪ್ರೇಮಂ ಪೂಜ್ಯಂ’ ಸಿನಿಮಾ ವೀಕ್ಷಣೆ ಮಾಡುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮನವಿ ಮಾಡಿದ್ದಾರೆ. “ಪ್ರೇಮಂ-ಪೂಜ್ಯಂ’ ಸಿನಿಮಾ ನವೆಂಬರ್ 12ನೇ ತಾರೀಕು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಎಲ್ಲರೂ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಿ ಹರಸಿ” ಎಂದು ದರ್ಶನ್ ಕೋರಿದ್ದಾರೆ.

ಪ್ರೇಮಂ ಪೂಜ್ಯಂ’ ಸಿನಿಮಾ ಪ್ರೇಮ್ ಅವರ 25ನೆಯ ಚಿತ್ರ ಆಗಿದೆ. ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ಈಗಾಗಲೇ ಹಿಟ್ ಆಗಿವೆ. ವಿದೇಶ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿರುವ ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ.

ಈ ಮೊದಲು ಅಕ್ಟೋಬರ್ 29 ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ‘ಭಜರಂಗಿ 2’ ಜೊತೆ ಸ್ಪರ್ಧೆ ಉಂಟಾಗುವ ಕಾರಣ ಕೊನೆಗೆ ‘ಪ್ರೇಮಂ ಪೂಜ್ಯಂ’ ಬಿಡುಗಡೆಯನ್ನು ಎರಡು ವಾರ ಮುಂದಕ್ಕೆ ಹಾಕಲಾಯಿತು.

‘ಪ್ರೇಮಂ ಪೂಜ್ಯಂ’ ಸಿನಿಮಾವನ್ನು ರಾಘವೇಂದ್ರ ಬಿಎಸ್ ನಿರ್ದೇಶನ ಮಾಡಿದ್ದಾರೆ. ಸಂಗೀತವನ್ನೂ ಅವರೇ ನೀಡಿದ್ದಾರೆ. ಚಿತ್ರದಲ್ಲಿ ಬೃಂದಾ ಆಚಾರ್ಯ, ಐಂದ್ರಿತಾ ರೇ ನಾಯಕಿಯರಾಗಿ ನಟಿಸಿದ್ದಾರೆ. ಅವಿನಾಶ್, ಮಾಸ್ಟರ್ ಆನಂದ್, ಸಾಧು ಕೋಕಿಲ, ಮಾಳವಿಕ ಅವಿನಾಶ್, ಟಿ.ಎಸ್.ನಾಗಾಭರಣ ಸೇರಿದಂತೆ ಇನ್ನೂ ಹಲವರು ನಟಿಸಿದ್ದಾರೆ.

ಸಂಗೀತಮಯ ಆಗಿರುವ ‘ಪ್ರೇಮಂ ಪೂಜ್ಯಂ’ ಚಿತ್ರಕ್ಕೆ ಹರಿಹರನ್ , ಮೋಹಿತ್ ಚೌಹಾಣ್, ವಿಜಯ್ ಪ್ರಕಾಶ್, ಸೋನು ನಿಗಮ್, ಅರ್ಮಾನ್ ಮಲಿಕ್ ಸೇರಿದಂತೆ ಹಲವು ಗಾಯಕರು ಹಾಡಿದ್ದಾರೆ. ಚಿತ್ರದಲ್ಲಿ ಒಟ್ಟು 12 ಹಾಡುಗಳು ಇದ್ದು, ಈಗಾಗಲೇ ಇವು ಸಾಕಷ್ಟು ಜನಪ್ರಿಯತೆ ಗಳಿಸಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!