ಸೈಬರ್ ಕ್ರೈಮ್, ಸಾಮಾಜಿಕ ಜಾಲತಾಣಗಳ ಅಪರಾಧಗಳನ್ನು ಇಟ್ಟುಕೊಂಡು ತಯಾರಾಗಿರುವ ‘100’ ಚಿತ್ರದ ಟ್ರೈಲರ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಕುತೂಹಲವನ್ನು ಮೂಡಿಸಿದೆ.
ಈ ಸಿನಿಮಾ ನವೆಂಬರ್ 19 ರಂದು ತೆರೆಗೆ ಬರಲಿದೆ. ಚಿತ್ರದ ಟ್ರೈಲರ್ ನಲ್ಲಿ ಕೊಲೆ, ಸೈಬರ್ ಅಪರಾಧದ ಅನಾವರಣ ಕಂಡು ಬಂದಿದೆ. ಹೀರೋ ಇಲ್ಲದ, ಇಬ್ಬರು ವಿಲನ್ ಇರುವ ಕತೆ ಇದು ಎಂದು ಹೇಳುವ ಟ್ರೈಲರ್ ನಲ್ಲಿ ರಮೇಶ್ ಇಂಟರ್ ನೆಟ್ ಗೊತ್ತಿಲ್ಲದ ಅಮಾಯಕ. ಸೈಬರ್ ಲೋಕದ ಪಾಪಿಗಳ ಕೈಯಿಂದ ನರಳುವ ರಮೇಶ್ ಪಾತ್ರದ ಸುತ್ತ ಟ್ರೈಲರ್ ಸುತ್ತುತ್ತದೆ.
ಬಹು ನಿರೀಕ್ಷಿತ ಈ ಸಿನಿಮಾವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡಿದ್ದಾರೆ. ರಮೇಶ್ ಅರವಿಂದ್ ಅವರು ಹೇಳುವ ಪ್ರಕಾರ, ” 100 ಅಂದರೆ ನಾನು v/s ಒಬ್ಬ ಸೈಬರ್ ಕ್ರಿಮಿನಲ್ ” ಆಗಿದೆ.
ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ಕೌಟುಂಬಿಕ ಕಥೆಯನ್ನು ಚಿತ್ರ ಹೊಂದಿದೆ ಎಂದು ರಮೇಶ್ ಹೇಳಿದ್ದಾರೆ.
ಗಾಳಿಪಟ-2 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಅವರು ಸೂರಜ್ ಪ್ರೊಡಕ್ಷನ್ಸ್ ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ರಮೇಶ್ ಅರವಿಂದ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ರಚಿತಾ ರಾಮ್, ರಮೇಶ್ ಅವರ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಇವರಿಬ್ಬರೂ ಪುಷ್ಪಕ ವಿಮಾನದಲ್ಲಿ ಜೊತೆಗೆ ನಟಿಸಿದ್ದರು.
ಇದಲ್ಲದೇ ಚಿತ್ರದಲ್ಲಿ ಪೂರ್ಣಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ, ಮಾಲತಿ ಸುಧೀರ್, ಬೇಬಿ ಸ್ಮಯ ಇತರರು ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜನೆ, ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಚಿತ್ರಕ್ಕೆ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ.
ರಾಮ ಶಾಮ ಭಾಮಾ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ರಮೇಶ್ ಅವರು ಸುಂದರಾಂಗ ಜಾಣ (2016) ಚಿತ್ರವನ್ನು ಕೊನೆಯದಾಗಿ ನಿರ್ದೇಶನ ಮಾಡಿದ್ದರು. ಈಗ 100 ಚಿತ್ರದ ಮೂಲಕ ನಿರ್ದೇಶಕರಾಗಿ ತೆರೆಯ ಮೇಲೆ ಬಂದಿದ್ದಾರೆ. ರಮೇಶ್ ನಿರ್ದೇಶನದ ಮೂಲಕ ಪ್ರೇಕ್ಷಕರನ್ನು ಯಾವ ರೀತಿ ಹಿಡಿದಿಡಲಿದ್ದಾರೆ ಎನ್ನುವುದಕ್ಕೆ ನ. 19ಕ್ಕೆ ಉತ್ತರ ಸಿಗಲಿದೆ.
Be the first to comment