ನಿರ್ದೇಶನ: ಸಿವಾ
ನಿರ್ಮಾಪಕ: ಕಲಾನಿಧಿ ಮಾರನ್
ತಾರಾಗಣ: ರಜನಿಕಾಂತ್, ಕೀರ್ತಿ ಸುರೇಶ್, ಮೀನಾ, ಖುಷ್ಬು, ನಯನತಾರಾ, ಜಗಪತಿ ಬಾಬು.
ರೇಟಿಂಗ್: ***1/2
ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಿತ್ರ ಎಂದು ಅಣ್ಣಾತ್ತೆ ನೋಡಲು ಹೋದರೆ ನಿರಾಸೆ ಕಟ್ಟಿಟ್ಟ ಬುತ್ತಿ. ಅಣ್ಣ-ತಂಗಿಯರ ಸೆಂಟಿಮೆಂಟ್ ಸಿನಿಮಾ ಎಂದು ಚಿತ್ರಮಂದಿರಕ್ಕೆ ಹೋದರೆ ನಿರ್ದೇಶಕರು ಪ್ರೇಕ್ಷಕರ ಜೊತೆ ಚಿತ್ರವನ್ನು ಕನೆಕ್ಟ್ ಮಾಡುವಲ್ಲಿ ವಿಫಲರಾಗಿರುವುದು ಅರಿವಾಗುತ್ತದೆ. ನಾಲ್ಕು ದಶಕಗಳ ಸಿನಿಮಾ ಅನುಭವವಿರುವ ರಜನಿಕಾಂತ್ ಅವರು ಈ ಸಿನಿಮಾದಲ್ಲಿ ನಿರ್ದೇಶಕರನ್ನು ನಂಬಿ ಮೋಸ ಹೋದಂತೆ ಕಂಡು ಬರುತ್ತದೆ.
ಅಣ್ಣ-ತಂಗಿಯರ ಕಥೆಯೆಂದು ಆರಂಭಗೊಳ್ಳುವ ಸಿನೆಮಾದಲ್ಲಿ ತಂಗಿ ಕೀರ್ತಿ ಸುರೇಶ್ ಯುವಕನೊಬ್ಬನಲ್ಲಿ ಅನುರಕ್ತಳಾಗುತ್ತಾಳೆ. ಅವಳು ಅಣ್ಣ ರಜನಿಕಾಂತ್ ಗೆ ಈ ವಿಷಯ ಹೇಳಿಕೊಳ್ಳದೆ ತೊಳಲಾಡುತ್ತಾಳೆ. ಬಳಿಕ ಕಥೆ ಕೊಲ್ಕತ್ತಾಕ್ಕೆ ಶಿಫ್ಟ್ ಆಗುತ್ತದೆ. ಅಲ್ಲಿ ಅಣ್ಣಾತ್ತೆ ಏಕಾಂಗಿಯಾಗಿ ನೂರಾರು ಜನರನ್ನು ಬಡಿದು ಹಾಕುವ ಸನ್ನಿವೇಶಗಳಿವೆ. ಇಲ್ಲಿ ಯಾವುದೇ ಕಾನೂನು, ಪೊಲೀಸ್, ನ್ಯಾಯಾಲಯದ ವ್ಯವಸ್ಥೆ ಕಂಡು ಬರುವುದಿಲ್ಲ. ಯಾವುದೇ ಲಾಜಿಕ್ ಇಲ್ಲದೆ ಸಿನಿಮಾ ಸಾಗುತ್ತದೆ.
ಸಿನಿಮಾದಲ್ಲಿ ನಟ-ನಟಿಯರ ಅಭಿನಯವು ನಾಟಕೀಯವಾಗಿ ಕಂಡು ಬಂದಿದೆ. ಸನಾತನ ಸಂಸ್ಕೃತಿ, ಪುರುಷ ಪ್ರಧಾನ ಸಮಾಜದ ವೈಭವಿಕರಣ ಕಾಣುವ ಸಿನೆಮಾದಲ್ಲಿ ಮಹಿಳೆಗೆ ಮದುವೆ ಸರ್ವಸ್ವ ಎನ್ನುವ ಹಳೆ ದಶಕಗಳ ಹಿಂದಿನ ಮನೋಭಾವದ ಎಳೆ ಸಿನಿಮಾದಲ್ಲಿದೆ. ರಜನಿಕಾಂತ್ ಅವರ ಇಮೇಜ್ ಹೆಚ್ಚಿಸುವ ಯಾವುದೇ ಚಿತ್ರಕಥೆ ಇಲ್ಲಿಲ್ಲದ ಕಾರಣ ನಿರಾಸೆ ಕಾಡುತ್ತದೆ.
2010ರ ಎಂಧಿರನ್ ಯಶಸ್ಸಿನ ನಂತರ ಯಶಸ್ಸಿನ ಕಡೆಗೆ ದೃಷ್ಟಿ ನೆಟ್ಟಿರುವ ರಜನಿಕಾಂತ್ ಅವರಿಗೆ ಈ ಚಿತ್ರ ಕೈ ಹಿಡಿಯುವಂತೆ ಕಾಣುತ್ತಿಲ್ಲ. ಚಿತ್ರದಲ್ಲಿ ರಜನಿಕಾಂತ್ ಅವರ ನಿಶ್ಯಕ್ತಿ ಢಾಳಾಗಿ ಕಾಣಿಸುತ್ತದೆ. ಇದನ್ನು ತಪ್ಪಿಸಲು ರಜನಿಕಾಂತ್ ಅವರನ್ನು ಲಾಂಗ್ ಶಾಟ್ ನಲ್ಲಿ ತೋರಿಸಲು ಯತ್ನಿಸಲಾಗಿದೆ. ರಜನಿಕಾಂತ್ ಅವರ ವಯಸ್ಸಿಗೆ ಈ ಚಿತ್ರಕಥೆ ಪೂರಕ ಅಲ್ಲದ ಕಾರಣ ಪ್ರೇಕ್ಷಕರಿಗೆ ನಿರಾಸೆ ಕಟ್ಟಿಟ್ಟ ಬುತ್ತಿಯಾಗಿದೆ.
ಲಾಜಿಕ್ ಇಲ್ಲದ ಈ ಚಿತ್ರ ಪ್ರೇಕ್ಷಕರಿಗೆ ಯಾವುದೇ ರೀತಿಯ ಮ್ಯಾಜಿಕ್ ಮಾಡುವುದಿಲ್ಲ. ಯಶಸ್ಸಿನ ಹಾದಿ ಹಿಡಿಯಲು ರಜನಿಕಾಂತ್ ತಮ್ಮ ವಯಸ್ಸಿಗೆ ಹೊಂದುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಕ್ಕಂತೆ ಕಾಣುತ್ತಾರೆ.
Be the first to comment