ಡಾ. ರಾಜ್ಕುಮಾರ್ ಟ್ರಸ್ಟ್ನಿಂದ ಪ್ರತಿ ವರ್ಷ ಸಾಧಕರಿಗೆ ನೀಡಲಾಗುವ ಪ್ರಶಸ್ತಿಯ ಜೊತೆಗೆ ಡಾ. ರಾಜ್ ಕುಮಾರ್ ಅವರ ಪ್ರತಿಮೆಯನ್ನು ನೀಡಲು ಪುನೀತ್ ರಾಜ್ಕುಮಾರ್ ಬಯಸಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ರಾಘವೇಂದ್ರ ರಾಜ್ ಕುಮಾರ್ ಅವರು, ಇತ್ತೀಚೆಗೆ ನನಗೆ ದಾದಾಸಾಹೇಬ್ ಫಾಲ್ಕೆ ಎಮ್ಎಸ್ಕೆ ಟ್ರಸ್ಟ್ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ಬಂದ ಸಂದರ್ಭದಲ್ಲಿ ಅಪ್ಪುಗೆ ಎಲ್ಲಿಲ್ಲದ ಸಂತೋಷ ಆಗಿತ್ತು. ನನ್ನನ್ನು ತಕ್ಷಣ ಭೇಟಿ ಮಾಡಿ ಸೆಲ್ಫಿ ತೆಗೆದು ರಾಘಣ್ಣ, ನಾವೂ ಸಹ ಈ ಮೂರ್ತಿಯ ರೂಪದ ಹಾಗೆ ಅಪ್ಪಾಜಿಯವರ ಮೂರ್ತಿಯನ್ನು ಮಾಡಿ ಎಂದಿನಂತೆ ಡಾ. ರಾಜ್ಕುಮಾರ್ ಟ್ರಸ್ಟ್ನಿಂದ ನೀಡುವ ಪ್ರಶಸ್ತಿಯನ್ನು ಇದೇ ರೂಪದಲ್ಲಿ ನೀಡೋಣ ಎಂದು ಹೇಳಿದ್ದ ಎಂದು ನೆನಪಿಸಿಕೊಂಡಿದ್ದಾರೆ.
ಡಾ. ರಾಜ್ಕುಮಾರ್ ಟ್ರಸ್ಟ್ನಿಂದ ಪ್ರತಿ ವರ್ಷ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಅದನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಪುನೀತ್ ಬಯಸಿದ್ದರು ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.
ಕಂಠೀರವ ಸ್ಡುಡಿಯೋ ಆವರಣದಲ್ಲಿ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ನಡೆದು ಇಂದಿಗೆ ಮೂರನೇ ದಿನ ಆಗಿದೆ. ಕುಟುಂಬದವರು ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯ ನೆರವೇರಿಸಿದ್ದಾರೆ. ಈ ಕಾರ್ಯ ಮುಗಿದ ನಂತರದಲ್ಲಿ ಸಾರ್ವಜನಿಕರಿಗೆ ಸಮಾಧಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ರಾಘವೇಂದ್ರ ರಾಜ್ ಕುಮಾರ್ ಈಗಾಗಲೇ ಹೇಳಿದ್ದಾರೆ.
____
Be the first to comment