ನಟಿ ಸಂಜನಾ ಗಲ್ರಾಣಿ ಅವರು ವಂಚನೆ ಸಂಬಂಧ ಆಪ್ತ ಸ್ನೇಹಿತ ರಾಹುಲ್ ಥೋನ್ಸೆ ಸೇರಿದಂತೆ ಮೂವರ ವಿರುದ್ಧ ದೂರು ನೀಡಿದ್ದು, ಈ ಬಗ್ಗೆ ಎಫ್ ಐಆರ್ ದಾಖಲಾಗಿದೆ.
ಕ್ಯಾಸಿನೊದಲ್ಲಿ ಹಣ ಹೂಡಿಕೆ ಮಾಡುವುದಾಗಿ ರಾಹುಲ್ ಥೋನ್ಸೆ ಸೇರಿದಂತೆ ಮೂವರು ಸಂಜನಾ ಅವರಿಗೆ ಕಳೆದ ಮೂರು ವರ್ಷಗಳಿಂದ ವಂಚನೆ ಎಸಗಿರುವುದಾಗಿ ದೂರು ನೀಡಲಾಗಿದೆ. ಪ್ರಕರಣ ಸಂಬಂಧ ಇಂದಿರಾನಗರ ಪೊಲೀಸರು ರಾಹುಲ್ ಥೋನ್ಸೆ, ರಾಮಕೃಷ್ಣ, ರಾಗೇಶ್ವರಿ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ರಾಹುಲ್ ಥೋನ್ಸೆ ಗೋವಾ ಮತ್ತು ಕೊಲಂಬೊದಲ್ಲಿ ಕ್ಯಾಸಿನೊಗಳ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಕ್ಯಾಸಿನೊಗಳಲ್ಲಿ ಹಣ ವಿನಿಯೋಗಿಸಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಸಂಜನಾಗೆ ಆಮಿಷ ಒಡ್ಡಿದ್ದ. ಲಾಭದ ಆಸೆಯಿಂದ ಕಳೆದ ಮೂರು ವರ್ಷಗಳಿಂದ ರಾಹುಲ್ ಥೋನ್ಸೆ ಸೇರಿದಂತೆ ಮೂವರ ಬ್ಯಾಂಕ್ ಖಾತೆಗಳಿಗೆ ಸಂಜನಾ ಗಲ್ರಾನಿ ಹಣ ಹಾಕಿದ್ದರು. ಆದರೆ ಯಾವುದೇ ಲಾಭಾಂಶ ನೀಡದೆ ಇದ್ದ ಕಾರಣ, ಹಣ ವಾಪಸ್ ಕೇಳಿದರೂ ಆರೋಪಿಗಳು ಹಣ ಹಿಂದಿರುಗಿಸಿಲ್ಲ ಎಂದು ಸಂಜನಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ತಾನು ಕೊಟ್ಟ ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ರಾಹುಲ್ ಥೋನ್ಸೆ ತಮ್ಮ ಘನತೆಗೆ ಧಕ್ಕೆ ತರುವಂತೆ ಮಾಡಿದ್ದಾರೆ ಎಂದು ಥೋನ್ಸೆ ಹಾಗೂ ಇಬ್ಬರ ಮೇಲೆ ವಿರುದ್ಧ ದೂರು ದಾಖಲಿಸಲು ನ್ಯಾಯಾಲಯದಲ್ಲಿ ಸಂಜನಾ ಪಿಸಿಆರ್ ದಾಖಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ 4ನೇ ಎಸಿಎಂಎಂ ನ್ಯಾಯಾಲಯ, ಇಂದಿರಾನಗರ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶ ನೀಡಿದೆ. ಕೋರ್ಟ್ ಆದೇಶದಂತೆ ರಾಹುಲ್ ಥೋನ್ಸೆ ಸೇರಿ ಮೂವರ ವಿರುದ್ಧ ಪೊಲೀಸರು ಐಪಿಸಿ 120ಬಿ, 107, 354, 406, 420, 506, ಕಲಂ 34ರ ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ.
Be the first to comment