ಶಿವರಾಜ್ ಕುಮಾರ್ ಮತ್ತು ಎ ಹರ್ಷ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಭಜರಂಗಿ 2 ಸಿನಿಮಾದ ಖಳನಟನ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು ಸಾಕಷ್ಟುಸದ್ದು ಮಾಡುತ್ತಿದೆ.
ಚಿತ್ರದ ಖಳನಾಯಕ ಆರಕನ ಲುಕ್ ನೋಡುಗರಿಗೆ ಭಯ ಹುಟ್ಟಿಸುವಂತಿದೆ. ಆದರೆ ಈ ಪೋಸ್ಟರ್‌ಗೆ ವೀಕ್ಷಕರಿಂದ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ. ಭಜರಂಗಿ 2 ಸಿನಿಮಾ ರಾಜ್ಯಾದ್ಯಂತ ಅ.29 ರಂದು ರಿಲೀಸ್ ಆಗುತ್ತಿದ್ದು, ಚಿತ್ರತಂಡ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಶಿವರಾಜ್ ಕುಮಾರ್ ಲುಕ್ ಪೋಸ್ಟರ್ ಈ ಹಿಂದೆ ರಿಲೀಸ್ ಆಗಿದೆ. ನಾಯಕಿ ಭಾವನಾ ಮೆನನ್, ಹಿರಿಯ ನಟಿ ಶ್ರುತಿ, ಖಳನಟ ಲೋಕಿ ಪೋಸ್ಟರ್‌ಗಳು ಕೂಡ ರಿಲೀಸ್ ಆಗಿ ಪ್ರೇಕ್ಷಕರಿಗೆ ಕಚಗುಳಿ ಇಡುವಲ್ಲಿ ಯಶಸ್ವಿ ಆಗಿದ್ದವು. ಈಗ ಹೊರಬಂದಿರುವ ಮತ್ತೊಬ್ಬ ಖಳನಟ ಚೆಲುವರಾಜು ಲುಕ್ ಹೊಂದಿರುವ ಪೋಸ್ಟರ್ ಭಿನ್ನತೆಯಿಂದ ಗಮನ ಸೆಳೆಯುತ್ತಿದೆ.
ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್‌ನಲ್ಲಿ ತಯಾರಾದ ಭಜರಂಗಿ ಮತ್ತು ವಜ್ರಕಾಯ ಸಿನಿಮಾ ಬಳಿಕ ಈ ಚಿತ್ರ ತಯಾರಾಗಿದೆ. ಶಿವಣ್ಣಗೆ ನಾಯಕಿಯಾಗಿ ಭಾವನಾ ಮೆನನ್ ಕಾಣಿಸಿಕೊಂಡಿದ್ದಾರೆ. ಭಾವನಾ ಟಗರು ಸಿನಿಮಾದ ಬಳಿಕ ಶಿವಣ್ಣ ಜೊತೆ ನಟಿಸುತ್ತಿದ್ದಾರೆ. ಪೋಸ್ಟರ್ ಮತ್ತು ಟೀಸರ್ ಮೂಲಕ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ಭಜರಂಗಿ-2 ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ಅ.29ರ ರಿಲೀಸ್ ದಿನ ಉತ್ತರ ಸಿಗಲಿದೆ.
ಅ.20ರ ಸಂಜೆ 6.45ಕ್ಕೆ ಚಿತ್ರದ ಎರಡನೇ ಟ್ರೈಲರ್ ಬಿಡುಗಡೆ ಆಗಲಿದ್ದು, ಕುತೂಹಲ ಮೂಡಿಸಿದೆ.

Be the first to comment