ವಿಜಯಾನಂದ ಚಿತ್ರದ ಆಡಿಷನ್​ಗೆ ಜನಸಾಗರ -ಇದೇ 24ರಂದು ಹುಬ್ಬಳ್ಳಿಯಲ್ಲಿ ಅದ್ದೂರಿ ಮುಹೂರ್ತ

ಸಾರಿಗೆ, ಪತ್ರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ವಿಆರ್​ಎಲ್ ಸಂಸ್ಥೆ, ವಿಆರ್​ಎಲ್ ಫಿಲಂ ಪ್ರೊಡಕ್ಷನ್ಸ್ ಮೂಲಕ ಮೊದಲ ಸಲ ಚಿತ್ರನಿರ್ಮಾಣಕ್ಕಿಳಿದಿದೆ. ಮೊದಲ ಕಾಣಿಕೆಯಾಗಿ ಪದ್ಮಶ್ರೀ ಪುರಸ್ಕೃತ ಮತ್ತು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನ ಆಧರಿತ ಬಯೋಪಿಕ್ ‘ವಿಜಯಾನಂದ’ ಸಿದ್ಧವಾಗುತ್ತಿದೆ.

ಚಿತ್ರಕ್ಕೆ ಪ್ರತಿಭಾನ್ವಿತ ಕಲಾವಿದರ ಆಯ್ಕೆಯನ್ನೂ ಮಾಡಲಾಗುತ್ತಿದೆ. ಆ ಪ್ರಯುಕ್ತ ಶನಿವಾರ ಬೆಂಗಳೂರಿನಲ್ಲಿ ಮೆಗಾ ಆಡಿಷನ್ ನಡೆಸಲಾಯಿತು. ಹೈಗ್ರೌಂಡ್ಸ್ ಕ್ರೆಸ್ಸೆಂಟ್ ರಸ್ತೆಯಲ್ಲಿನ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಆಡಿಷನ್​ನಲ್ಲಿ ಸಾವಿರಾರು ಕಲಾವಿದರು ಆಗಮಿಸಿ ಪ್ರತಿಭೆ ಪ್ರದರ್ಶಿಸಿದರು.

ಬೆಳಗ್ಗೆ 10ರಿಂದ ಆರಂಭವಾದ ಆಡಿಷನ್ ಪ್ರಕ್ರಿಯೆ ಸಂಜೆ 6 ಗಂಟೆ ವರೆಗೂ ನಡೆಯಿತು. ಬರೋಬ್ಬರಿ 3ಸಾವಿರದಷ್ಟು ಅಭ್ಯರ್ಥಿಗಳು ಆಡಿಷನ್ ಎದುರಿಸಿದರು. ಕೇವಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಮಾತ್ರವಲ್ಲದೆ, ಸುತ್ತಲಿನ ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಗಳಿಂದಲೂ ನಟನಾ ಆಕಾಂಕ್ಷಿಗಳು ಆಗಮಿಸಿ ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸಿದರು.

ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ‘ವಿಜಯಾನಂದ’ ಚಿತ್ರದ ನಿರ್ಮಾಪಕರಾದ ಆನಂದ ಸಂಕೇಶ್ವರ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ, ಮಂಡಳಿಯ ಪದಾಧಿಕಾರಿಗಳ ಜತೆಗೆ ಉಭಯಕುಶಲೋಪರಿ ವಿಚಾರಿಸಿದರು.

ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು, ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ಮಾಪಕ ಎನ್.ಎಮ್ ಸುರೇಶ್ ಆನಂದ ಸಂಕೇಶ್ವರ ಅವರನ್ನು ವಾಣಿಜ್ಯ ಮಂಡಳಿಗೆ ಮತ್ತು ಚಿತ್ರೋದ್ಯಮಕ್ಕೆ ಸ್ವಾಗತಿಸಿ, ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಸಾರಾ ಗೋವಿಂದು, ‘ಚಿತ್ರ ನಿರ್ಮಾಣ ಕ್ಷೇತ್ರಕ್ಕೆ ವಿಆರ್​ಎಲ್ ಸಂಸ್ಥೆ ಅಡಿ ಇಟ್ಟಿರುವುದು ನಿಜಕ್ಕೂ ಖುಷಿಯ ವಿಚಾರ. ಈ ಸಂಸ್ಥೆಯಿಂದ ಮತ್ತಷ್ಟು, ಮಗದಷ್ಟು ಸಿನಿಮಾಗಳು ಬರಲಿ. ಕನ್ನಡ ಚಿತ್ರೋದ್ಯಮಕ್ಕೆ ಈ ಸಂಸ್ಥೆಯಿಂದ ಅಪಾರ ಕೊಡುಗೆ ಸಿಗಲಿ’ ಎಂದರು.

ಸದ್ಯ ಚಿತ್ರೀಕರಣ ಪೂರ್ವ ಕೆಲಸಗಳನ್ನು ಮುಗಿಸಿಕೊಂಡಿರುವ ‘ವಿಜಯಾನಂದ’ ತಂಡ ಕಲಾವಿದರ ಆಯ್ಕೆಯ ಕೊನೇ ಹಂತದಲ್ಲಿದೆ. ಇದು ಮುಗಿಯುತ್ತಿದ್ದಂತೆ ಇದೇ 24ರಂದು ಹುಬ್ಬಳ್ಳಿಯಲ್ಲಿ ಚಿತ್ರದ ಅದ್ದೂರಿ ಮುಹೂರ್ತ ಸಮಾರಂಭ ನಡೆಯಲಿದೆ.

ಚಿತ್ರಕ್ಕೆ ರಿಶಿಕಾ ಶರ್ಮಾ ನಿರ್ದೇಶನ ಮಾಡಿದರೆ, ನಿಹಾಲ್ ರಜಪೂತ್ ನಾಯಕರಾಗಿ ನಟಿಸುತ್ತಿದ್ದಾರೆ. ಅನಂತ್ ನಾಗ್ ಚಿತ್ರದಲ್ಲಿ ವಿಜಯ್ ಸಂಕೇಶ್ವರ ಅವರ ತಂದೆಯ ಪಾತ್ರದಲ್ಲಿ ನಟಿಸಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!