ಕನ್ನಡದ ಹಲವಾರು ಚಿತ್ರಗಳಲ್ಲಿ ವಿಲನ್ ಪಾತ್ರದ ಮೂಲಕ ಮಿಂಚಿದ ಹಿರಿಯ ಕಲಾವಿದ ಸತ್ಯಜಿತ್ ಅವರು ವಯೋಸಹಜ ಅನಾರೋಗ್ಯದಿಂದ ನಿಧನ ಆಗಿದ್ದಾರೆ.
ತೀವ್ರ ಅನಾರೋಗ್ಯದ ಕಾರಣ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಸತ್ಯಜಿತ್ ಅವರು ಕೆಲ ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮುಂಜಾನೆ 2 ಗಂಟೆಯ ವೇಳೆಗೆ ನಿಧನ ಹೊಂದಿದ್ದಾರೆ. ಅವರಿಗೆ 72 ವರ್ಷ ಆಗಿತ್ತು.
ಸತ್ಯಜಿತ್ ಅವರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಲನ್ ಹಾಗೂ ಪೋಷಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಗಡಸು ಧ್ವನಿ, ಅಜಾನುಬಾಹು ಆಗಿದ್ದ ಅವರು ತಮ್ಮ ಖಡಕ್ ಮ್ಯಾನರಿಸಂ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದರು.
ವೃತ್ತಿಯಲ್ಲಿ ಬಸ್ ಚಾಲಕ ಆಗಿದ್ದ ಸತ್ಯಜಿತ್ ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. ಬಳಿಕ ಸಿನಿಮಾಗಳಲ್ಲೂ ನಟಿಸಲು ಆರಂಭಿಸಿದರು. ಸಯ್ಯದ್ ನಿಜಾಮುದ್ದೀನ್ ಮೂಲ ಹೆಸರಿನ ಅವರು ಸಿನಿಮಾ ರಂಗಕ್ಕೆ ಪ್ರವೇಶ ಪಡೆದ ಬಳಿಕ ತಮ್ಮ ಹೆಸರನ್ನು ಸತ್ಯಜಿತ್ ಎಂದು ಬದಲಿಸಿಕೊಂಡರು.
ಕಳೆದ ಕೆಲ ವರ್ಷಗಳು ವೈಯಕ್ತಿಕವಾಗಿ ಸತ್ಯಜಿತ್ ಅವರಿಗೆ ಹರ್ಷದಾಯಕ ಆಗಿರಲಿಲ್ಲ. ಅನಾರೋಗ್ಯದಿಂದ ಅವರು ಸಮಸ್ಯೆ ಎದುರಿಸಿದರು. ಗ್ಯಾಂಗ್ರೀನ್ ಬಂದು ಒಂದು ಕಾಲು ಕತ್ತರಿಸಬೇಕಿತ್ತು. ಆ ಬಳಿಕ ಕೌಟುಂಬಿಕ ಸಮಸ್ಯೆಗೂ ಸತ್ಯಜಿತ್ ಒಳಗಾದರು. ಆಸ್ತಿ ಕೋರಿ ಮಗಳು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದರು. ಆರ್ಥಿಕ ಸಮಸ್ಯೆಗೂ ಸತ್ಯಜಿತ್ ಒಳಗಾಗಿದ್ದರು.
ಹಿರಿಯ ನಟ ಸತ್ಯಜಿತ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಕಂಬನಿ ಮಿಡಿದಿದ್ದಾರೆ. ಹೆಗಡೆನಗರದಲ್ಲಿರುವ ಸತ್ಯಜಿತ್ ನಿವಾಸದಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಇಸ್ಲಾಂ ಸಂಪ್ರದಾಯದಂತೆ ಅಂತಿಮಕ್ರಿಯೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
_________
Be the first to comment