ಚಿತ್ರ: ‘ಇದು ಆಕಾಶವಾಣಿ ಬೆಂಗಳೂರು ನಿಲಯ’
ನಿರ್ದೇಶನ: ಎಂ ಹರಿಕೃಷ್ಣ
ನಿರ್ಮಾಣ: ಶಿವಾನಂದಪ್ಪ ಬಳ್ಳಾರಿ
ತಾರಾಗಣ: ರಣವೀರ್ ಪಾಟೀಲ್, ನಿಕಿತಾ ಸ್ವಾಮಿ
ರೇಟಿಂಗ್ : 3.5/5
ಹೆಸರು ಕೇಳಿದಾಗ ಇದು ಆಕಾಶವಾಣಿಗೆ ಸಂಬಂಧಿಸಿದ ಕತೆ ಎಂದುಕೊಳ್ಳುವುದು ಸಹಜ. ಆದರೆ ಇದು ಆಕಾಶ್ ಮತ್ತು ವಾಣಿ ಎನ್ನುವ ಇಬ್ಬರ ಕತೆ. ಜೊತೆಯಲ್ಲಿ ರೇಡಿಯೋ ಕೂಡ ಒಂದು ಪಾತ್ರವಾಗಿರುವ ಕಾರಣ ಇದು ಆಕಾಶವಾಣಿ ಬೆಂಗಳೂರು ನಿಲಯ ಎನ್ನುವ ಹೆಸರು ಚಿತ್ರಕ್ಕೆ ಚೆನ್ನಾಗಿಯೇ ಹೊಂದಿಕೊಂಡಿದೆ.
ವಾಣಿ ಹಳ್ಳಿಯ ಹುಡುಗಿ. ಅಕೆಯ ತಂದೆಗೆ ಪಂಕ್ಚರ್ ಅಂಗಡಿಯಲ್ಲಿ ಕೆಲಸ. ತಂದೆ ಮತ್ತು ಮಗಳು ಇಬ್ಬರೇ ಇರುವ ಮುದ್ದಿನ ಸಂಸಾರ ಅದು. ಆದರೆ ಒಂದು ದಿನ ಆ ತಂದೆ ತೀರಿಕೊಂಡಾಗ ವಾಣಿ ಅನಾಥೆಯಾಗುತ್ತಾಳೆ. ಅಷ್ಟು ಕತೆ ಫ್ಲ್ಯಾಶ್ ಬ್ಯಾಕ್ ಮೂಲಕ ಹೇಳಲಾಗುತ್ತದೆ. ಈ ಕತೆ ಹೇಳುವ ವಾಣಿ ಪ್ರಸ್ತುತ ಬೆಂಗಳೂರಿನ ಐಷಾರಾಮಿ ಮನೆಯೊಂದರಲ್ಲಿ ವಾಸವಾಗಿರುತ್ತಾಳೆ. ತನ್ನ ಕುರಿತಾದ ಅರ್ಧಂಬರ್ಧ ವಿಚಾರಗಳನ್ನು ಮಾತ್ರ ಮನೆಯ ಕೆಲಸದಾಕೆಯ ಜೊತೆಗೆ ಹಂಚಿಕೊಳ್ಳುವ ವಾಣಿ ಉಳಿದ ವಿಚಾರಗಳನ್ನು ಅಡಗಿಸಿದ್ದೇಕೆ? ಆಕೆಯ ಬಾಳಲ್ಲಿ ಬಳಿಕ ನಡೆದಿದ್ದೇನು? ಇಂದಿನ ಐಷಾರಾಮಿ ಬದುಕಿಗೆ ಹಣ ಎಲ್ಲಿಂದ ಬಂದಿರುತ್ತದೆ? ನಾಯಕಿಯ ಬಾಳಲ್ಲಿ ಆಕಾಶ್ ಪಾತ್ರವೇನು ಎನ್ನುವುದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು.
ಚಿತ್ರದಲ್ಲಿ ಆಕಾಶ್ ಪಾತ್ರವನ್ನು ಉತ್ತರ ಕರ್ನಾಟಕದ ಹುಡುಗ ವೀರೇಂದ್ರ ಪಾಟೀಲ್ ನಿರ್ವಹಿಸಿದ್ದಾರೆ. ಅವರು ಹದಿಹರೆಯದ ಹುಡುಗ, ಪ್ರೇಮಿ ಮತ್ತು ದೆವ್ವದ ರೂಪದಲ್ಲಿ ಹೀಗೆ ಮೂರು ಶೇಡ್ ಮೂಲಕ ಕಾಣಿಸಿರುವುದು ವಿಶೇಷ. ವಾಣಿಯಾಗಿ ಕಾಣಿಸಿರುವ ನಿಕಿತಾ ಸ್ವಾಮಿ ನಟನೆ ಮೆಚ್ಚುವಂಥದ್ದು. ದೆವ್ವ ಮೈಗೆ ಸೇರಿಕೊಂಡಾಗಿನ ನಟನೆಯಲ್ಲಿ ಮೈ ಮರೆಸುತ್ತಾರೆ. ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ನಾರಾಯಣ ಸ್ವಾಮಿ ತಮ್ಮ ನಟನೆಯ ಮೂಲಕ ಪಾತ್ರ ಯಾವ ತಿರುವು ಪಡೆಯಲಿದೆ ಎನ್ನುವ ಕುತೂಹಲ ಮೂಡಿಸುತ್ತಾರೆ. ನಾಯಕಿಯ ತಂದೆ ಪಂಕ್ಚರ್ ಹಾಕುವ ಕೆಲಸಗಾರನಾಗಿ ನಾಗೇಂದ್ರ ಶಾ ಅವರ ನಟನೆ ಸಹಜವೆನಿಸುತ್ತದೆ. ಒಂದೇ ದೃಶ್ಯದಲ್ಲಿ ಬಂದರೂ ಟೆನ್ನಿಸ್ ಕೃಷ್ಣ ನಗಿಸುವಲ್ಲಿ ಯಶಸ್ವಿಯಾಗುತ್ತಾರೆ.
ಚಿತ್ರದ ಕತೆಯಲ್ಲಿ ಮ್ಯಾಟ್ರಿಮೊನಿ ಜಾಲತಾಣಗಳ ಮೂಲಕ ಹೇಗೆ ಹುಡುಗರನ್ನು ವಂಚಿಸಲಾಗುತ್ತದೆ ಎನ್ನುವುದನ್ನು ತಿಳಿಸಿರುವುದು ಒಂದು ಉತ್ತಮ ಸಂದೇಶ ರವಾನಿಸಿದಂತಿದೆ. ಮಾತ್ರವಲ್ಲ ಜೀವನದಲ್ಲಿ ಯಾರನ್ನಾದರೂ ವಂಚಿಸಿದರೆ ಅದರ ಫಲ ಕರ್ಮರೂಪದಲ್ಲಿ ಕಾಡುತ್ತದೆ ಎನ್ನುವುದು ಚಿತ್ರದ ಮೂಲಕ ತೋರಿಸಲಾಗಿದೆ. ಒಟ್ಟಿನಲ್ಲಿ ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಜೊತೆಗೆ ಒಂದು ಸಂದೇಶಾತ್ಮಕ ಚಿತ್ರ ನೋಡಲು ಬಯಸುವವರು ಈ ಸಿನಿಮಾ ಖಂಡಿತವಾಗಿ ನೋಡಬಹುದು.
Be the first to comment