ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಕೆಟ್ಟದಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಹಿಂದಿ ಚಿತ್ರಗಳ ಗೀತ ರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಮುಂಬೈ ಪೊಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ.
ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ, ತಾಲಿಬಾನ್ ನೊಂದಿಗೆ ಹಿಂದೂ ಬಲಪಂಥೀಯರನ್ನು, ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಜಾವೇದ್ ಅಖ್ತರ್ ಹೋಲಿಕೆ ಮಾಡಿದ್ದರು. ವಕೀಲ ಸಂತೋಷ್ ದುಬೆ ಎನ್ನುವವರು ಕಾನೂನಾತ್ಮಕ ನೋಟಿಸ್ ಕಳುಹಿಸಿ ಕ್ಷಮೆ ಯಾಚಿಸುವಂತೆ ಜಾವೇದ್ ಅಖ್ತರ್ ಅವರಿಗೆ ಕೋರಿದ್ದರು. ಆದರೆ ಅವರು ಕ್ಷಮೆ ಯಾಚಿಸದ ಹಿನ್ನೆಲೆಯಲ್ಲಿ ಸಂತೋಷ್ ದುಬೆ ನೀಡಿದ ದೂರಿನ ಆಧಾರದ ಮೇಲೆ ಮುಲುಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲು ಮಾಡಲಾಗಿದೆ.
ಜಾವೇದ್ ಅಖ್ತರ್ ಕೆಟ್ಟದಾಗಿ ಹೇಳಿಕೆ ನೀಡುವ ಮೂಲಕ ಐಪಿಸಿ ಸೆಕ್ಷನ್ 499 (ಮಾನಹಾನಿ) 500 ( ಮಾನಹಾನಿಗೆ ಶಿಕ್ಷೆ) ಅಡಿಯಲ್ಲಿ ಅಪರಾಧ ಮಾಡಿರುವುದಾಗಿ ದುಬೆ ನೋಟಿಸ್ ನಲ್ಲಿ ಹೇಳಿದ್ದರು. ಈಗ ಪೊಲೀಸರು ಐಪಿಸಿ ಸೆಕ್ಷನ್ 500 ( ಮಾನನಷ್ಟಕ್ಕಾಗಿ ಶಿಕ್ಷೆ) ಅಡಿಯಲ್ಲಿ ಜಾವೇದ್ ಅಖ್ತರ್ ವಿರುದ್ಧ ಎಫ್ ಐಆರ್ ದಾಖಲಾಗಿರುವುದಾಗಿ ಮುಲುಂಡ್ ಠಾಣೆಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಖಾಸಗಿ ವಾಹಿನಿಯಲ್ಲಿ, ತಾಲಿಬಾನಿಗಳು ಇಸ್ಲಾಮಿಕ್ ದೇಶವನ್ನು ಬಯಸುತ್ತಾರೆ. ಈ ಜನರು ಹಿಂದೂ ರಾಷ್ಟ್ರವನ್ನು ಮಾಡಲು ಬಯಸುತ್ತಾರೆ ಎಂದು ನಾಗ್ಪುರ್ ಪ್ರಧಾನ ಕಚೇರಿಯ ಹಿಂದುತ್ವ ಸಂಘಟನೆಯ ಹೆಸರನ್ನು ಹೇಳದೆ ಜಾವೇದ್ ಅಖ್ತರ್ ಹೇಳಿಕೆ ನೀಡಿದ್ದರು. ಈ ಸಂಬಂಧ ಜಾವೇದ್ ಅಖ್ತರ್ ಅವರಿಗೆ ಥಾಣೆಯ ಕೋರ್ಟ್ ಕೆಲ ದಿನಗಳ ಹಿಂದೆ ಶೋಕಾಸ್ ನೋಟಿಸ್ ನೀಡಿದೆ. ಆರ್ಎಸ್ಎಸ್ ಕಾರ್ಯಕರ್ತ ವಿವೇಕ್ ಚಂಪಾನೇಕರ್ ಅವರು ಥಾಣೆಯ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮತ್ತು ಜಂಟಿ ಸಿವಿಲ್ ನ್ಯಾಯಾಧೀಶರ (ಹಿರಿಯ ವಿಭಾಗ) ನ್ಯಾಯಾಲಯದಲ್ಲಿ ಸಲ್ಲಿಸಿರುವ ಮೊಕದ್ದಮೆಯಲ್ಲಿ 1 ಕೋಟಿ ರೂ. ಪರಿಹಾರವನ್ನು ಕೋರಿದ್ದಾರೆ.
Be the first to comment