ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು ಅಭಿಮಾನಿಗಳಿಂದ ಶುಭ ಹಾರೈಕೆ ಹರಿದು ಬರುತ್ತಿದೆ.
1976ರಲ್ಲಿ ಹುಟ್ಟಿದ ಇಂದ್ರಜಿತ್ ಲಂಕೇಶ್ ಅವರು ಇಂದು 46ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಪತ್ರಕರ್ತರಾಗಿ ಹಾಗೂ ಕನ್ನಡ ಚಿತ್ರ ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿರುವ ಇಂದ್ರಜಿತ್ ಲಂಕೇಶ್ ಇನ್ನಷ್ಟು ಸಾಧನೆ ಮಾಡಲಿ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ತಮ್ಮ ತಂದೆ ಲಂಕೇಶ್ ಅವರ ಗರಡಿಯಲ್ಲಿ ಅಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಇಂದ್ರಜಿತ್ ಲಂಕೇಶ್ ಅವರು 2001ರಲ್ಲಿ ಮೊದಲ ಬಾರಿಗೆ ಕನ್ನಡ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಅನಿರುದ್ಧ್ ನಾಯಕ ನಟರಾಗಿ ಕಾಣಿಸಿಕೊಂಡಿದ್ದ ತುಂಟಾಟ ಇವರ ಮೊದಲ ನಿರ್ದೇಶನದ ಚಿತ್ರ. ಬಳಿಕ ಇಂದ್ರಜಿತ್ ಲಂಕೇಶ್ ಅವರು ದರ್ಶನ್ ಹಾಗೂ ವಸುಂಧರಾ ದಾಸ್ ಅವರನ್ನು ಒಳಗೊಂಡ ‘ ಲಂಕೇಶ್ ಪತ್ರಿಕೆ ‘ ಚಿತ್ರ ನಿರ್ದೇಶಿಸಿದರು.2004 ರಲ್ಲಿ ಇಂದ್ರಜಿತ್ ಲಂಕೇಶ್ ನಿರ್ದೇಶಿಸಿದ ಮೊನಾಲಿಸಾ ಚಿತ್ರ ಸೂಪರ್ ಹಿಟ್ ಆಯಿತು. ಇದು ಮಲ್ಟಿಫ್ಲೆಕ್ಸ್ ಗಳಲ್ಲಿ ಪ್ರದರ್ಶನದ ಮೊದಲ ಕನ್ನಡ ಚಿತ್ರ ಎನ್ನುವ ಖ್ಯಾತಿಗೆ ಪಾತ್ರವಾಯಿತು.
ಬಳಿಕ ಇಂದ್ರಜಿತ್ ಅವರು ಉಪೇಂದ್ರ ಹಾಗೂ ದೀಪಿಕಾ ಪಡುಕೋಣೆ ಅವರನ್ನು ಒಳಗೊಂಡ ‘ ಐಶ್ವರ್ಯ ‘ ಚಿತ್ರ ನಿರ್ದೇಶಿಸಿದರು. ಈ ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಯಿತು.ಆನಂತರ ಇಂದ್ರಜಿತ್ ಲಂಕೇಶ್ ಅವರು ಹುಡುಗ-ಹುಡುಗಿ, ಲವ್ ಯು ಆಲಿಯಾ, ಶಕೀಲಾ ಚಿತ್ರಗಳನ್ನು ನಿರ್ದೇಶಿಸಿದರು.
ವರ್ಷದ ಹಿಂದೆ ಇಂದ್ರಜಿತ್ ಲಂಕೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಹಾವಳಿ ಇದ್ದು ನಟ, ನಟಿಯರು ಡ್ರಗ್ಸ್ ಸೇವನೆ ಹಾಗೂ ಮಾರಾಟದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮೂಲಕ ಸಂಚಲನ ಉಂಟು ಮಾಡಿದರು. ಇಂದ್ರಜಿತ್ ಅವರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ತನಿಖೆ ನಡೆಸಿ ನಟಿಯರಾದ ಸಂಜನಾ, ರಾಗಿಣಿ ಅವರನ್ನು ಬಂಧಿಸಿದರು. ಡ್ರಗ್ಸ್ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ.
ಇಂದ್ರಜಿತ್ ಲಂಕೇಶ್ ಅವರು ಖಾಸಗಿ ವಾಹಿನಿಯ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.
__________
Be the first to comment