ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ತಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ವಿಜಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಎಸ್.ಕೆ.ಮೋದಿ ಎನ್ನುವ ವ್ಯಕ್ತಿ ನನ್ನ ಹಲ್ಲೆ ನಡೆಸುವ ಜೊತೆಗೆ ಪಿಸ್ತೂಲು ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ರಾಜು ತಾಳಿಕೋಟೆ ಅವರು ದೂರಿನಲ್ಲಿ ಹೇಳಿದ್ದಾರೆ.
ರಾಜು ತಾಳಿಕೋಟೆ ಅಕ್ಕನ ಮಗ ಫಯಾಜ್ ಕರಜಗಿ ಮತ್ತು ಪತ್ನಿ ಸನಾ ಕರಜಗಿ ನಡುವಣ ದಾಂಪತ್ಯದ ಕಲಹದಲ್ಲಿ ರಾಜು ತಾಳಿಕೋಟೆ ಮಧ್ಯ ಪ್ರವೇಶ ಮಾಡುವ ಜೊತೆಗೆ ಪತ್ನಿ ಜತೆಗೂಡಿ ತನ್ನ ಹಲ್ಲೆ ಮಾಡಿದ್ದಾರೆ ಎಂದು ಈ ಹಿಂದೆ ಸನಾ ಕರಜಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈಗ ರಾಜು ತಾಳಿಕೋಟೆ ಪ್ರತಿದೂರು ನೀಡಿದ್ದಾರೆ.
” ಸನಾ ಹಾಗೂ ಎಸ್ ಕೆ ಮೋದಿ ನಡುವೆ ಸಂಬಂಧವಿತ್ತು. ಅದು ಆಕೆಯ ಗಂಡನಿಗೆ ಗೊತ್ತಾಗಿ ಆಕೆಗೆ ವಿಚ್ಛೇಧನ ನೀಡುತ್ತೇನೆಂದು ಹೇಳಿದ್ದ. ಆಗ ಸನಾ ವಿಷ ಕುಡಿದಳು. ಆಸ್ಪತ್ರೆಯಲ್ಲಿ ದಾಖಲಾದ ವೇಳೆ ಮತ್ತಿನ ಔಷಧದಿಂದಾಗಿ ಆಕೆ ತಾನು ಮಾಡಿದ ಮೋಸವನ್ನೆಲ್ಲ ಗಂಡನ ಎದುರಿಗೆ ಹೇಳಿದಳು. ಇದರಿಂದ ಫಯಾಜ್ ಆಕೆಯನ್ನು ದೂರ ಇಟ್ಟ. ನಾನು ಇಬ್ಬರಿಗೂ ಬುದ್ಧಿ ಹೇಳಿ ಹೀಗೆ ಮಾಡಬಾರದು ಎಂದು ಹೇಳಿದೆ. ಆದರೆ ಎಸ್.ಕೆ.ಮೋದಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಅವನು ಹುಡುಗಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಾನೆ. ಆತ ಪಿಸ್ತೂಲು ತೋರಿಸಿ ನನಗೆ ಬೆದರಿಕೆ ಹಾಕಿದ್ದಲ್ಲದೆ ಹಲ್ಲೆಯನ್ನೂ ಮಾಡಿದ್ದಾನೆ” ಎಂದು ತಾಳಿಕೋಟೆ ಹೇಳಿದ್ದಾರೆ.
ಇದೇ ವೇಳೆ “ರಾಜು ತಾಳಿಕೋಟೆ, ಪತ್ನಿ ಪ್ರೇಮ ತಾಳಿಕೋಟೆ ನನಗೆ ಬಲವಂತದಿಂದ ವಿಷ ಕುಡಿಸಿ ನನ್ನನ್ನು ಸಾಯಿಸಲು ಯತ್ನಿಸಿದರು. ನನ್ನ ಮಕ್ಕಳನ್ನೂ ಹಿಂಸಿಸಿದರು” ಎಂದು ಸನಾ ಕರಜಗಿ ಆರೋಪ ಮಾಡಿದ್ದಾರೆ.
ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದಾರೆ.
____________________

Be the first to comment