ಅಂಕೆಯಿರದ ತಿರುವುಗಳ ಚಿತ್ರ ಲಂಕೆ
ಚಿತ್ರ: ಲಂಕೆ (Lanke)
ನಿರ್ದೇಶಕ : ರಾಮ್ ಪ್ರಸಾದ್ (Ramprasad)
ನಿರ್ಮಾಣ: ಪಟೇಲ್ ಶ್ರೀನಿವಾಸ್ (Patel Srinivas)
ಕಲಾವಿದರು: ಯೋಗಿ (Yogi), ಸಂಚಾರಿ ವಿಜಯ್ (Sanchari Vijay), ಕಾವ್ಯ ಶೆಟ್ಟಿ, ಕೃಷಿ ತಾಪಂಡ (Krishi Thapanda), ಎಸ್ತರ್ ನೊರೊನ್ಹಾ, ಶರತ್ ಲೋಹಿತಾಶ್ವ, ಗಾಯತ್ರಿ ಜಯರಾಮನ್ ಮುಂತಾದವರು.
ಬಿಸಿನಿಮಾಸ್ ರೇಟಿಂಗ್ : 5/4 STAR
ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ಅಗತ್ಯ ಅಂಶಗಳೊಂದಿಗೆ ಸಿದ್ಧವಾಗಿ ಬಂದಿದೆ ಲಂಕೆ. ಸ್ಟಾರ್ ಸಿನಿಮಾಗಳು ಥಿಯೇಟರ್ಗೆ ಬರಲು ಕಾಯುತ್ತಿದ್ದ ಪ್ರೇಕ್ಷಕರಿಗೆ ರಸಪೂರ್ಣ ಮನರಂಜನೆ ನೀಡುವಂಥ ಚಿತ್ರವಾಗಿ ಲಂಕೆ ಮೂಡಿ ಬಂದಿದೆ.
ಚಿತ್ರದ ಆರಂಭದಲ್ಲೇ ನಾಯಕ ರಾಮ್ ಪರಪ್ಪನ ಅಗ್ರಹಾರದಿಂದ ಹೊರಗೆ ಬರುತ್ತಾನೆ. ಅದೇ ನಾಯಕನ ಹಿನ್ನೆಲೆ ತಿಳಿಯುವ ಆಸಕ್ತಿಗೆ ದೂಡುತ್ತದೆ. ಅನಾಥ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಸಮಾಜ ಸೇವಕಿಯಾಗಿ ಕಾವ್ಯಾ ಶೆಟ್ಟಿಯನ್ನು ತೋರಿಸುತ್ತಾರೆ. ಅನಾಥಾಶ್ರಮ ನಡೆಸುವ ಯುವತಿಯಾಗಿ ಕೃಷಿ ತಾಪಂಡ ನಟಿಸಿದ್ದಾರೆ. ಕೃಷಿ ತಾಪಂಡ ಮತ್ತು ಯೋಗಿಯ ಭೇಟಿ ಸ್ನೇಹವನ್ನು ಮೂಡಿಸುತ್ತದೆ. ಆದರೆ ಸಂದರ್ಭವೊಂದರಲ್ಲಿ ಕೃಷಿ ತಾಪಂಡ ವೇಶ್ಯಾವಾಟಿಕೆಯ ಕೇಂದ್ರವೊಂದರಲ್ಲಿ ಬಂಧಿತರಾಗುತ್ತಾರೆ. ಆ ಕೇಂದ್ರವನ್ನು ಯಾರು ನಡೆಸುತ್ತಿರುತ್ತಾರೆ. ನಾಯಕಿ ಕೃಷಿ ತಾಪಂಡ ಅಲ್ಲಿರುವುದನ್ನು ತಿಳಿದ ಚಿತ್ರದ ನಾಯಕ ಯೋಗಿ ಹೇಗೆ ಅಲ್ಲಿಗೆ ಹೋಗುತ್ತಾರೆ? ಮುಂದೇನಾಗುತ್ತದೆ ಎನ್ನುವುದನ್ನು ರೋಚಕವಾಗಿ ತೋರಿಸಿದ್ದಾರೆ ನಿರ್ದೇಶಕರು.
ಚಿತ್ರದಲ್ಲಿ ನಾಯಕನ ಎಂಟ್ರಿಯಾಗುವ ಮೊದಲೇ ಸಿನಿಮಾದ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಸೆಳೆದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಅದಕ್ಕೆ ತಕ್ಕಂತೆ ಪ್ರಶಾಂತ್ ಸಿದ್ದಿಯವರ ತಮಾಷೆಯ ನಟನೆ ಕೂಡ ಸಾಥ್ ನೀಡುತ್ತದೆ. ನಾಯಕನ ಎಂಟ್ರಿಯಾದ ಮೇಲೆ ಹಾಡು, ಕುಣಿತ, ಕುಣಿದಾಟ ಎಲ್ಲವೂ ರೋಚಕ ರೋಮಾಂಚಕ. ಪ್ರಥಮ ಚಿತ್ರದಲ್ಲೇ ನಿರ್ದೇಶಕ ರಾಮ್ ಪ್ರಸಾದ್ ಅವರು ಈ ಮಟ್ಟದಲ್ಲಿ ಆಕರ್ಷಕ ಚಿತ್ರ ನೀಡಿರುವುದು ಅಚ್ಚರಿಯ ವಿಷಯವೆಂದೇ ಹೇಳಬಹುದು. ಪಾತ್ರಗಳ ಆಯ್ಕೆಯಲ್ಲಿಯೂ ಅವರು ಗೆದ್ದಿದ್ದಾರೆ. ನಾಯಕನಾಗಿ ಯೋಗಿ ಲುಕ್ ಹೊಸ ರೀತಿಯಲ್ಲಿದ ಕ್ಲಾಸ್ ಮಾದರಿಯಲ್ಲಿ ಕಂಡರೂ ಅವರು ತಮ್ಮ ಎಂದಿನ ಅಭಿಮಾನಿಗಳನ್ನು ಸೆಳೆಯುವಂಥ ಮಾಸ್ ಸಂದರ್ಭಗಳಲ್ಲಿ ಗೆದ್ದಿದ್ದಾರೆ. ಕಾವ್ಯಾ ಶೆಟ್ಟಿಯ ಪಾತ್ರದಲ್ಲಿರುವ ಟ್ವಿಸ್ಟ್ ಕತೆಯ ದಾರಿಯನ್ನೇ ಬದಲಿಸುತ್ತದೆ. ವೇಶ್ಯಾವಾಟಿಕೆಯ ಕೇಂದ್ರವನ್ನು ನಿಭಾಯಿಸುವ ಮಂಗಳಮುಖಿಯ ಪಾತ್ರದಲ್ಲಿ ಶರತ್ ಲೋಹಿತಾಶ್ವ ನಟಿಸಿರುವುದು ವಿಶೇಷ. ಪೊಲೀಸ್ ಅಧಿಕಾರಿಯಾಗಿ ಶೋಭರಾಜ್, ನಾಯ್ಡು ಎನ್ನುವ ಖಳನಾಗಿ ಡ್ಯಾನಿಯಲ್ ಕುಟ್ಟಪ್ಪ ಅವರು ಎಂದಿನಂತೆ ಆಕರ್ಷಕ ಅಭಿನಯ ನೀಡಿದ್ದಾರೆ.
ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಸಂಚಾರಿ ವಿಜಯ್ ಅವರ ಪಾತ್ರ. ಚಿತ್ರದ ಫ್ಲ್ಯಾಶ್ ಬ್ಯಾಕ್ ಕತೆಯಲ್ಲಿ ಬರುವ ಸಂಚಾರಿ ವಿಜಯ್ ಎಂಟ್ರಿ ಅವರ ಅಗಲಿಕೆಯ ನೆನಪಿನಿಂದ ಪ್ರೇಕ್ಷಕರನ್ನು ಭಾವುಕಗೊಳಿಸುತ್ತದೆ. ಅದೇ ಸಂದರ್ಭದಲ್ಲಿ ಕತೆ ಮುಂದುವರಿದಂತೆ ಪಾತ್ರವಾಗಿಯೂ ಕಾಡುತ್ತಾರೆ. ಒಟ್ಟಿನಲ್ಲಿ ಕನ್ನಡ ಚಿತ್ರವೊಂದು ಅಪರೂಪಕ್ಕೆ ಬಂದರೂ ಪ್ರೇಕ್ಷಕರನ್ನು ಭರ್ಜರಿಯಾಗಿ ರಂಜಿಸುವಲ್ಲಿ ಯಶಸ್ವಿಯಾಗಿದೆ.
-ಭೀಮರಾಯ
Be the first to comment