ಕನ್ನಡದ ನಟಿ ಆಶಿಕಾ ರಂಗನಾಥ್ ತಮಿಳು ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸುವ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ತಮಿಳು ಸಿನಿಮಾದಲ್ಲಿ ನಟಿಸುತ್ತಿರುವ ಆಶಿಕಾ ರಂಗನಾಥ್ ಒಳ್ಳೆಯ ಬ್ಯಾನರ್ ನಲ್ಲಿ ನಟಿಸಲು ಅವಕಾಶ ದೊರಕಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ತಮಿಳಿನಲ್ಲಿ ಈಗಾಗಲೇ ಹದಿಮೂರು ಸಿನಿಮಾಗಳಲ್ಲಿ ನಟಿಸಿ ಯಶಸ್ವೀ ನಾಯಕ ಎನಿಸಿರುವ ಅಥರ್ವ ಅವರ ಜೊತೆ ನಾಯಕಿಯಾಗಿ ಆಶಿಕಾ ನಟಿಸುತ್ತಿದ್ದಾರೆ. ಅಥರ್ವ ಅವರು ಕನ್ನಡದ ಹಿರಿಯ ಸಿನಿಮಾ ನಿರ್ದೇಶಕ ಸಿದ್ದಲಿಂಗಯ್ಯ ಅವರ ಮೊಮ್ಮಗ ಆಗಿದ್ದಾರೆ.
“ಇದೇ ಮೊದಲ ಬಾರಿಗೆ ಭಿನ್ನ ಕತೆಯುಳ್ಳ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಕ್ರೀಡೆ ಪ್ರಧಾನವಾದ ಕತೆಯುಳ್ಳ ಸಿನಿಮಾ ಇದಾಗಿದೆ. ಚಿತ್ರಕತೆ -ಸಂಭಾಷಣೆಗಳನ್ನು ಮೊದಲೇ ಕನ್ನಡ ಮತ್ತು ಇಂಗ್ಲೀಷ್ಗೆ ಅನುವಾದ ಮಾಡಿ ಕೊಡುತ್ತಾರೆ. ಅದನ್ನು ನೋಡಿಕೊಂಡು ಮರುದಿನ ದಿನ ಚಿತ್ರೀಕರಣಕ್ಕೆ ತಯಾರಾಗುತ್ತೇನೆ” ಎಂದು ಆಶಿಕಾ ರಂಗನಾಥ್ ಹೇಳಿದ್ದಾರೆ.
ತಮಿಳುನಾಡಿನ ತಂಜಾವೂರಿನ ಬಳಿ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾದಲ್ಲಿ ಆಶಿಕಾ ರಂಗನಾಥ್ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದು ಕಬಡ್ಡಿ ಆಟಗಾರ್ತಿಯ ಪಾತ್ರ ಮಾಡುತ್ತಿದ್ದಾರೆ.
ಆಶಿಕಾ ಅವರು ‘ಕ್ರೇಜಿ ಬಾಯ್’ ಸಿನಿಮಾದ ಮೂಲಕ ವೃತ್ತಿಜೀವನ ಆರಂಭಿಸಿದರು. ಶಿವರಾಜ್ ಕುಮಾರ್ ಅವರ ‘ಮಾಸ್ ಲೀಡರ್’, ಗಣೇಶ್ ಅವರ ‘ಮುಗುಳು ನಗೆ’, ಶರಣ್ ಅವರ ‘ರ್ಯಾಂಬೊ 2’, ಅಜಯ್ ರಾವ್ ನಟನೆಯ ‘ತಾಯಿಗೆ ತಕ್ಕ ಮಗ’ ಸಿನಿಮಾಗಳು ಹೆಸರು ತಂದುಕೊಟ್ಟವು.
_____________
Be the first to comment