ಡಾ|| ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ.

 

ಕಳೆದ ವರ್ಷ ದೆಹಲಿಯಲ್ಲಿ ವಿಷ್ಣು ರಾಷ್ಟ್ರೀಯ ಉತ್ಸವ ನಡೆದಿತ್ತು. ಜನರಿಂದ ಒಳ್ಳೆಯ ಸ್ಪಂದನೆಯೂ ಸಿಕ್ಕಿತ್ತು. ಆದರೆ ವಿಷ್ಣುವರ್ಧನ್‍ರ ಎಲ್ಲ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ನೇರವಾಗಿ ಪಾಲ್ಗೊಳ್ಳಲು ಆಗಿರಲಿಲ್ಲ. ಹಾಗಾಗಿ ಈ ಬಾರಿ ಬೆಂಗಳೂರಿನಲ್ಲೇ ರಾಷ್ಟ್ರೀಯ ಉತ್ಸವ ಹಮ್ಮಿಕೊಳ್ಳಲಾಗಿದ್ದು; ಸಾವಿರಾರು ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಡಾ|| ವಿಷ್ಣುವರ್ಧನ್ ಅವರು ಬದುಕಿದ್ದರೇ ಬರಲಿರುವ ಸೆಪ್ಟೆಂಬರ್ 18ಕ್ಕೆ 69 ವರ್ಷ ತುಂಬುತ್ತಿತ್ತು. ಭೌತಿಕವಾಗಿ ಅವರು ನಮ್ಮೊಂದಿಗಿಲ್ಲದಿದ್ದರೂ ಇದ್ದಾರೆನ್ನುವಂತಹ ವಾತಾವರಣವಿದೆ. ಹೀಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ವಿಷ್ಣು ಅಭಿಮಾನಿಗಳು ಡಾ|| ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ಸಜ್ಜಾಗಿದ್ದಾರೆ. ಅವರ 69ನೇ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 16, 17 ಮತ್ತು 18ರಂದು ಮೂರು ದಿನ ಬೆಂಗಳೂರಿನಲ್ಲಿ ರಾಷ್ಟ್ರೀಯ ಉತ್ಸವ ಆಚರಣೆಗೆ ವೇದಿಕೆ ಸಿದ್ಧವಾಗುತ್ತಿದೆ. ವಿಶೇಷವಾಗಿ ಈ ಬಾರಿ ಉತ್ಸವದ ಕೊನೆಯ ದಿನವಾದ ಸೆಪ್ಟೆಂಬರ್ 18ರಂದು ರಾಜ್ಯದ 30 ಜಿಲ್ಲೆಗಳಲ್ಲೂ ಜಿಲ್ಲಾಡಳಿತದ ಸಹಯೋಗದೊಂದಿಗೆ ವಿಷ್ಣು ಜಯಂತಿ ಆಚರಿಸಲಾಗುತ್ತಿದ್ದು, ಇದಕ್ಕೆ ವಿಷ್ಣುವರ್ಧನ್ ಕುಟುಂಬದವರ ಬೆಂಬಲವೂ ಸಿಗುತ್ತಿದೆ.

ಕುವೆಂಪು ಕಲಾಕ್ಷೇತ್ರದಲ್ಲಿ ನಡೆಯಲಿರುವ ಮೊದಲ ದಿನದಂದು ಹಿರಿಯ ಪತ್ರಕರ್ತರಾದ ಜೋಗಿ, ಸದಾಶಿವಶೆಣೈ ಮತ್ತು ಎನ್.ಎಸ್.ಶ್ರೀಧರ್‍ಮೂರ್ತಿ ರಚಿಸಿರುವ ವಿಷ್ಣು ಕುರಿತ ಪುಸ್ತಕಗಳ ಬಿಡುಗಡೆ, ಸರಳ ರೀತಿಯ ಸ್ಪರ್ಧೆಗಳು, ಅವರೊಂದಿಗೆ ನಟಿಸಿದ ನಾಯಕಿಯರ ಮಾತುಗಳು. ಎರಡನೆ ದಿವಸ ಅಭಿಮಾನಿಗಳಿಂದ ಕನ್ನಡ-ಕರ್ನಾಟಕ ಕುರಿತ ರಸಮಂಜರಿ. ಅಂದು 30 ಜಿಲ್ಲೆಗಳಲ್ಲಿ ಡಾ.ವಿಷ್ಣು ಜಯಂತಿ ಆಚರಣೆ. ಅವರ ಪುಣ್ಯಭೂಮಿ ಅಭಿವೃದ್ದಿ ಪಡಿಸಿ, ಮೈಸೂರಿನಲ್ಲಿ ಮೆಮೋರಿಯಲ್ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಗೂಗಲ್ ಕಂಪೆನಿಯು ಇದಕ್ಕೆ ಕೈ ಜೋಡಿಸಿದೆ.

ಸಮಾರೋಪ ದಿನದಂದು ಡಾ.ವಿಷ್ಣು ಆದರ್ಶ ದಿನವೆಂದು ಘೋಷಿಸಲು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಸಾಹಿತಿ ಕೆ.ಕಲ್ಯಾಣ್ ಉತ್ಸವ ಗೀತೆಗೆ ಸಾಹಿತ್ಯ ಮತ್ತು ಸಂಗೀತ ನೀಡಿದ ಹಾಡು ಡಾ.ಭಾರತಿವಿಷ್ಣುವರ್ಧನ್ ಹುಟ್ಟುಹಬ್ಬದಂದು ಹೊರಬರಲಿದೆ. ಹಾಗೆಯೇ ವಿಷ್ಣುಸರ್ ಕುರಿತ ಪುಸ್ತಕವನ್ನು ಬರೆಯಲು ಶುರು ಮಾಡಿದ್ದು, ಮುಂದಿನ ವರ್ಷ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ವೀರಪ್ಪನಾಯ್ಕ ಚಿತ್ರದಲ್ಲಿ ವಿಷ್ಣುವರ್ಧನ್ ಗೆಟಪ್‍ನ ಪುತ್ಥಳಿಯನ್ನು ಅನಾವರಣ ಮಾಡುತ್ತಿರುವುದು ಈ ಸಲದ ವಿಶೇಷ. ಸಮಾರಂಭದಲ್ಲಿ 25 ಸಾವಿರಕ್ಕೂ ಹೆಚ್ಚು ಜನ, ಜೊತೆಗೆ ಅಮೇರಿಕಾ, ದುಬೈ, ಮತ್ತು ಆಸ್ಟ್ರೇಲಿಯಾದಿಂದ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ. ಈ ವರ್ಷ ವಿಷ್ಣುವರ್ಧನ್ ಅವರ ಮೊದಲ ಚಿತ್ರ ನಾಗರ ಹಾವು ರೀ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡಿರುವುದರಿಂದ ವಿಷ್ಣು ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ಕೆನೆಗಟ್ಟಿದೆ..!

Be the first to comment

Leave a Reply

Your email address will not be published. Required fields are marked *

Translate »
error: Content is protected !!