ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಅವರು ಡ್ರಗ್ಸ್ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ಖಾತ್ರಿಯಾಗಿದ್ದು ಇದರಿಂದ ಈ ನಟಿಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
2020ರಲ್ಲಿ ಬೆಂಗಳೂರು ನಗರದ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದರು. ಬಳಿಕ ಇವರಿಬ್ಬರ ತಲೆ ಕೂದಲು, ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಈಗ ಎಫ್ಎಸ್ಎಲ್ ವರದಿಯಿಂದ ಈ ನಟಿಯರಿಬ್ಬರೂ ಡ್ರಗ್ಸ್ ಸೇವಿಸುವುದು ದೃಢಪಟ್ಟಿದೆ.
ವೈದ್ಯಕೀಯ ವರದಿಯ ಆಧಾರದ ಮೇಲೆ ಸಿಸಿಬಿ ಪೊಲೀಸರು ನಟಿಯರ ಜಾಮೀನು ರದ್ದು ಮಾಡುವಂತೆ ನ್ಯಾಯಾಲಯವನ್ನು ಕೋರುವ ಸಾಧ್ಯತೆ ಇದೆ. ಇದರಿಂದ ಡ್ರಗ್ಸ್ ಪ್ರಕರಣ ಈ ನಟಿಯರನ್ನು ಇನ್ನಷ್ಟು ಕಾಡುವ ಸಾಧ್ಯತೆ ಇದೆ. ಡ್ರಗ್ಸ್ ಸೇವನೆ ಮತ್ತು ಮಾರಾಟಕ್ಕೆ ಸಹಾಯ ಮಾಡಿದ ಆರೋಪವನ್ನು ಈ ಇಬ್ಬರು ನಟಿಯರ ಮೇಲೆ ಸಿಸಿಬಿ ಪೊಲೀಸರು ಹೊರಿಸಿದ್ದಾರೆ.
ರಾಗಿಣಿ 140 ದಿನಗಳ ಕಾಲ, ಸಂಜನಾ ಗಲ್ರಾನಿ 85 ದಿನಗಳ ಕಾಲ ಜೈಲಿನಲ್ಲಿದ್ದರು. ಈಗ ಇಬ್ಬರೂ ಜಾಮೀನಿನ ಮೇಲೆ ಹೊರ ಬಂದಿದ್ದು ವಿಚಾರಣೆಗೆ ಹಾಜರಾಗುತ್ತಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 20ಕ್ಕೂ ಹೆಚ್ಚು ಮಂದಿಯನ್ನು ಸಿಸಿಬಿ ಪೊಲೀಸರು ಇದುವರೆಗೆ ಬಂಧಿಸಿದ್ದಾರೆ. ಈ ಇಬ್ಬರು ನಟಿಯರ ಜೊತೆಗೆ ಆದಿತ್ಯ ಆಳ್ವಾ, ಶಿವಪ್ರಕಾಶ್, ವೀರೇನ್ ಖನ್ನಾ, , ವೈಭವ್ ಜೈನ್, ವಿನಯ್ ಕುಮಾರ್, ರಾಹುಲ್ ಟೊನ್ಸೆ, ಲೂಮ್ ಪೆಪ್ಪರ್, ಪ್ರಶಾಂತ್ ರಾಜ್, ಅಭಿಸ್ವಾಮಿ, ಮೊಹಮ್ಮದ್ ಮೆಸ್ಸಿ, ವಿನೋದ್ ಸೇರಿದಂತೆ ಕೆಲ ವಿದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ಬಂಧನಕ್ಕೆ ಒಳಗಾಗಿದ್ದರು.
Be the first to comment