ಮೆಗಾಸ್ಟಾರ್ ಚಿರಂಜೀವಿ ಇಂದು 66ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು ಅವರ ಸಾಧನೆ ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ.
ಟಾಲಿವುಡ್ನ ಅತ್ಯಂತ ಜನಪ್ರಿಯ ನಾಯಕ ನಟ ಆಗಿರುವ ಅವರು ಈಗಲೂ ಚಿತ್ರರಂಗದಲ್ಲಿ ಸಕ್ರಿಯ ಆಗಿದ್ದಾರೆ. ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಚಿರಂಜೀವಿ ಅವರು ಜನಪ್ರಿಯ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ.
1 ಕೋಟಿ ರೂ.ಗಳಿಗೂ ಅಧಿಕ ಸಂಭಾವನೆ ಪಡೆದ ಮೊದಲ ತೆಲುಗು ನಟ ಎನ್ನುವ ಖ್ಯಾತಿ ಚಿರಂಜೀವಿ ಅವರದ್ದಾಗಿತ್ತು. 1992ರಲ್ಲಿ ತೆರೆಕಂಡ ‘ಆಪತ್ಬಾಂಧವುಡು’ ಚಿತ್ರಕ್ಕೆ ಚಿರಂಜೀವಿ 1.25 ಕೋಟಿ ರೂ. ಸಂಭಾವನೆ ಪಡೆದಿದ್ದರು. ಆ ಸಮಯದಲ್ಲಿ ಚಿರಂಜೀವಿಯಷ್ಟು ಸಂಭಾವನೆಯನ್ನು ಅಮಿತಾಭ್ ಬಚ್ಚನ್ ಕೂಡಾ ಪಡೆದಿರಲಿಲ್ಲ.
‘ದಿ ರಿಟರ್ನ್ ಆಫ್ ದಿ ಥೀಫ್ ಆಫ್ ಬಾಗ್ದಾದ್’ ಎಂಬ ಹಾಲಿವುಡ್ ಚಿತ್ರದಲ್ಲಿ 1999ರಲ್ಲಿ ಚಿರಂಜೀವಿ ‘ಅಬು’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಚಿತ್ರ ಕಾರಣಾಂತರದಿಂದ ಪೂರ್ಣ ಆಗಲಿಲ್ಲ.
ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಆಹ್ವಾನಿತರಾದ ದಕ್ಷಿಣ ಭಾರತದ ಮೊದಲ ನಟ ಚಿರಂಜೀವಿ ಆಗಿದ್ದರು. ಅವರು 1987ರ ಅಕಾಡೆಮಿ ಅವಾರ್ಡ್ಸ್ಗೆ ಆಹ್ವಾನಿತರಾಗಿ ಆ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.
ಇಂಗ್ಲೀಷ್ಗೆ ಡಬ್ ಆದ ಮೊದಲ ದಕ್ಷಿಣ ಭಾರತೀಯ ಚಿತ್ರ ಚಿರಂಜೀವಿಯವರದ್ದು ಆಗಿದೆ.1990ರಲ್ಲಿ ತೆರೆಕಂಡ ‘ಕೊಡಮ ಸಿಂಹಮ್’ ಚಿತ್ರ ಇಂಗ್ಲೀಷ್ಗೆ ಡಬ್ ಆಗಿತ್ತು.
1992ರಲ್ಲಿ ಬಿಡುಗಡೆಯಾದ ಚಿರಂಜೀವಿ ನಟನೆಯ ‘ಘರನ ಮೊಗುಡು’ ಚಿತ್ರವು ಬಾಕ್ಸಾಫೀಸ್ನಲ್ಲಿ 10 ಕೋಟಿ ರೂ. ಗಳಿಸಿದ ಮೊದಲ ಚಿತ್ರವೆಂಬ ದಾಖಲೆಗೆ ಭಾಜನವಾಯಿತು.
1999- 2000ದ ಆರ್ಥಿಕ ವರ್ಷದಲ್ಲಿ ಚಿರಂಜೀವಿ ಅತೀ ಹೆಚ್ಚು ತೆರಿಗೆ ಪಾವತಿಸಿದ ವ್ಯಕ್ತಿಯಾಗಿದ್ದರು. ಈ ಕಾರಣದಿಂದ 2002ರಲ್ಲಿ ಚಿರಂಜೀವಿಯವರಿಗೆ ಕೇಂದ್ರ ಸರ್ಕಾರದ ವತಿಯಿಂದ ‘ಸನ್ಮಾನ್ ಅವಾರ್ಡ್’ ನೀಡಿ ಗೌರವಿಸಲಾಯಿತು.
__________
Be the first to comment