ಚಿತ್ರ: ಗ್ರೂಫಿ
ತಾರಾಗಣ: ಆರ್ಯನ್ , ಪದ್ಮಶ್ರೀ ಜೈನ್ , ಗಗನ್ , ಉಮಾ ಮಯೂರಿ , ಸಂಧ್ಯಾ , ಪ್ರಜ್ವಲ್ , ಸಂಗೀತ ,ಹನುಮಂತೇಗೌಡ , ರಘು ಪಾಂಡೇಶ್ವರ್ , ರಜನಿಕಾಂತ್ ಮುಂತಾದವರು
ನಿರ್ದೇಶನ: ಡಿ ರವಿ ಅರ್ಜುನ್
ನಿರ್ಮಾಣ: ಕೆ.ಜಿ.ಸ್ವಾಮಿ
ಲಿಯಾ ಗ್ಲೋಬಲ್ ಮೀಡಿಯಾ
ಸಂಗೀತ ನಿರ್ದೇಶಕ : ವಿಜೇತ ಕೃಷ್ಣ
ಛಾಯಾಗ್ರಹಣ : ಅಜಯ ಲಕ್ಷ್ಮಿ ಕಾಂತ
ಬಿಸಿನಿಮಾಸ್ ರೇಟಿಂಗ್ 5/3.5
ಚಿತ್ರ ವಿಮರ್ಶೆ: ಕುತೂಹಲ ಕೆರಳಿಸುವ ಸುಂದರ ಚಿತ್ರ
ಚಿತ್ರದ ನಾಯಕ ಕಾರ್ತಿಕ್ ಮಾಧ್ಯಮವೊಂದರಲ್ಲಿ ಛಾಯಾಗ್ರಾಹಕ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಡೆಯುವ ದಂಧೆಯೊಂದರ ತನಿಖಾ ವರದಿಗಾಗಿ ಕಚೇರಿಯಿಂದ ಹೊರಡುತ್ತಾನೆ. ಒಬ್ಬನೇ ಹೋಗಬೇಕಾದ ಅನಿವಾರ್ಯತೆಗೆ ಸಿಕ್ಕಿ ಪಶ್ಚಿಮ ಘಟ್ಟ ಸೇರಿ ಹಿಲ್ ಟಾಪ್ ಎನ್ನುವ ಲಾಡ್ಜ್ ನಲ್ಲಿ ತಂಗುತ್ತಾನೆ. ಅಲ್ಲಿ ಆತನಿಗೆ ದೆವ್ವಗಳು ಆಡಿಸಿದ ಅನುಭವವಾಗುತ್ತದೆ. ಆದರೆ ಮೇಲ್ನೋಟದ ಧೈರ್ಯದಿಂದಲೇ ಎಲ್ಲವನ್ನು ಎದುರಿಸುವ ಆತನಿಗೆ ಅಲ್ಲಿ ನಾಲ್ವರ ತಂಡವೊಂದು ಪರಿಚಯವಾಗುತ್ತದೆ. ಕಾಲೇಜ್ ವಿದ್ಯಾರ್ಥಿಗಳಂತಿದ್ದ ಅವರು ಆತನಿಗೆ ಆತ್ಮೀಯರಾಗುತ್ತಾರೆ. ಅವರಲ್ಲೊಬ್ಬಳಾದ ಭುವಿ ಎನ್ನುವಾಕೆಯೊಂದಿಗೆ ಪ್ರೇಮವೂ ಆಗುತ್ತದೆ. ಆದರೆ ಮಧ್ಯಂತರದ ವೇಳೆಗೆ ಸಿನಿಮಾ ಹೊಸ ತಿರುವು ಪಡೆಯುತ್ತದೆ. ಅದಕ್ಕೆ ಕಾರಣ ನಾಯಕ ತನ್ನ ಹೊಸ ಸ್ನೇಹಿತರ ಜೊತೆಗೆ ತೆಗೆಯುವ ಸೆಲ್ಫಿ! ಚಿತ್ರದಲ್ಲಿ ಹೇಳುವಂತರ ಅದು ಸೆಲ್ಫಿಯಲ್ಲ; ಗ್ರೂಫಿ.ಅದೇನೇ ಇರಲಿ, ಆ ಫೊಟೊ ಹಾಗೆ ಕಾಣಲು ಕಾರಣವೇನು ಎನ್ನುವುದೇ ಚಿತ್ರದ ಉಳಿದಾರ್ಧ ಭಾಗದ ಕತೆ.
ಒಟ್ಟು ಚಿತ್ರವನ್ನು ಗಮನಿಸುವಾಗ ಆಕರ್ಷಣೆ ಮೂಡಿಸುವ ಪ್ರಥಮ ಅಂಶವೆಂದರೆ ಛಾಯಾಗ್ರಹಣ. ಸುಂದರವಾದ ಪರಿಸರ ಒಂದು ಕಡೆಯಾದರೆ, ಹಸಿರು ಸಿರಿ, ನೀರ ಝರಿಗಳನ್ನು ಮಾತ್ರವಲ್ಲ ಯುವ ಕಲಾವಿದರನ್ನು ಕೂಡ ಆಕರ್ಷಕವಾಗಿ ತೋರಿಸಿರುವ ಕೀರ್ತಿ ಛಾಯಾಗ್ರಾಹಕ ಅಜಯ್ ಲಕ್ಷ್ಮೀಕಾಂತ್ ಅವರಿಗೆ ಸಲ್ಲುತ್ತದೆ. ಕಾರ್ತಿಕ್ ಪಾತ್ರದಲ್ಲಿ ನಟಿಸಿರುವ …. ಮತ್ತು ನಾಯಕಿ ಭುವಿಯಾಗಿ ಕಾಣಿಸಿರುವ … ಇಬ್ಬರದೂ ಮುದ್ದಾದ ಮುಖ ಮತ್ತು ಭರವಸೆಯ ನಟನೆ. ಕಾಲೇಜ್ ಹುಡುಗರ ಮುಗ್ದತೆ, ಭಂಡತನಗಳನ್ನು ಬಹಳ ಚೆನ್ನಾಗಿ ತೋರಿಸಲಾಗಿದೆ. ನೆಗೆಟಿವ್ ಎನರ್ಜಿಗಳನ್ನು ಇರಿಸಿಕೊಂಡೇ ಒಂದು ಪಾಸಿಟಿವ್ ಸ್ಟೋರಿ ಮಾಡಿರುವ ಕೀರ್ತಿ ನಿರ್ದೇಶಕ ಡಿ ರವಿ ಅರ್ಜುನ್ ಅವರದು. ಪ್ರತಿಯೊಂದು ಪಾತ್ರಗಳು ಕೂಡ ಕತೆಗೆ ಪೂರಕವಾಗಿಯೇ ಇದೆ. ಆರಂಭದಲ್ಲಿ ಹಿಲ್ ಟಾಪ್ ಲಾಡ್ಜ್ನಲ್ಲಿ ದೆವ್ವದ ಕಾಟ ಇರುವಂತೆ ನಾಯಕನಿಗೆ ಆಗುವ ಅನುಭಗಳಿಗೆ ಒಂದು ತಾರ್ಕಿಕ ಅಂತ್ಯ ಚಿತ್ರ ದಲ್ಲಿದೆ.
ಸಾಮಾನ್ಯವಾಗಿ ಸಿನಿಮಾಗಳಲ್ಲಿ ದೆವ್ವ ಪ್ರವೇಶ ಮಾಡಿದೆ ಎಂದರೆ ಅಲ್ಲೊಂದು ಪ್ರತಿಕಾರದ ಕತೆ ಕಟ್ಟಿಟ್ಟ ಬುತ್ತಿ. ಆದರೆ ಇಲ್ಲಿ ದೆವ್ವಕ್ಕೆ ಪ್ರತಿಕಾರದ ಬದಲು ಪ್ರತ್ಯುಪಕಾರಿ ಆತ್ಮಗಳು ಕಾಣಿಸುವುದು ವಿಶೇಷ! ಹಾಗಾಗಿ ಒಟ್ಟು ಚಿತ್ರದ ಶೀರ್ಷಿಕೆಯಿಂದ ಹಿಡಿದು, ಕ್ಲೈಮ್ಯಾಕ್ಸ್ ತನಕ ಪ್ರತಿಯೊಂದು ವಿಚಾರದಲ್ಲೂ ಹೊಸತನದ ಪ್ರಯೋಗ ಮಾಡಿರುವ ನಿರ್ದೇಶಕರ ಪ್ರಯತ್ನ ಖಂಡಿತವಾಗಿ ಅಭಿನಂದನಾರ್ಹ ಎಂದೇ ಹೇಳಬಹುದು.
ಚಿತ್ರದ ಮತ್ತೊಂದು ಪ್ರಮುಖ ಅಂಶ ಹಾಡುಗಳು. ಚಿತ್ರದ ಸಂಗೀತ ಮಾತ್ರವಲ್ಲ, ಹಿನ್ನೆಲೆ ಸಂಗೀತ ಕೂಡ ಪ್ರೇಕ್ಷಕರನ್ನು ಚಿತ್ರದೊಂದಿಗೆ ತನ್ಮಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಅದರಲ್ಲಿಯೂ ಜಯಂತ ಕಾಯ್ಕಿಣಿ ಮತ್ತು ಹೃದಯ ಶಿವ ಅವರ ರಚನೆಗಳು ವಿಜೇತ್ ಕೃಷ್ಣ ಅವರ ಸಂಗೀತದಲ್ಲಿ ಎಲ್ಲರ ಮನಗೆಲ್ಲುತ್ತದೆ. ಹಿಲ್ ಟಾಪ್ ಮ್ಯಾನೇಜರ್ ಗುಂಡಣ್ಣನಾಗಿ ರಘು ಪಾಂಡೇಶ್ವರ್ ಅವರ ನಟನೆಯೂ ಗಮನಾರ್ಹ.
ಒಟ್ಟಿನಲ್ಲಿ ದೆವ್ವದ ಚಿತ್ರವಾದರೂ ವಿಪರೀತ ಕಾಟವಿರದ, ಹವ್ಯಾಸಗಳೇ ಹೇಗೆ ಅಪಾಯವಾಗಬಹುದೆನ್ನುವ ಪಾಠವಿರುವ ಚಿತ್ರ ಇದು. ಕಾಲೇಜ್ ಸ್ನೇಹಿತರಿಂದ ಹಿಡಿದು ಕೌಟುಂಬಿಕವಾಗಿಯೂ ನೋಡಬಹುದಾದ ಅಪರೂಪದ ಚಿತ್ರ ಇದು ಎಂದು ಧೈರ್ಯವಾಗಿ ಹೇಳಬಹುದು.
@ಬಿಸಿನಿಮಾಸ್ ಡಾಟ್ ಇನ್