ತೆಲುಗಿನ ಬಾಹುಬಲಿ ಚಿತ್ರವನ್ನು ಮೀರಿಸುವ ಚಿತ್ರವನ್ನು ಕನ್ನಡದಲ್ಲಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಿದ್ಧತೆ ಆರಂಭಗೊಂಡಿದೆ.
‘ಕೃಷ್ಣರಾಜ 4’ ಸಿನಿಮಾ ನಿರ್ಮಾಣಕ್ಕೆ ಗಾನ ಶ್ರವಣ್ ಸ್ವಾಮೀಜಿ ಮುಂದಾಗಿದ್ದಾರೆ. ತೆಲುಗಿನ ರಾಜಮೌಳಿ ಅವರನ್ನು ಮೀರಿಸುವ ನಿರ್ದೇಶಕನಿಗಾಗಿ ಅವರು ಹುಡುಕಾಟ ಆರಂಭಿಸಿದ್ದು ಚಿತ್ರದ ಸಿದ್ಧತೆ ನಡೆದಿದೆ.
ಕನ್ನಡದಲ್ಲಿ ‘ಕೆಜಿಎಫ್’, ‘ಕಬ್ಜ’ ಸೇರಿದಂತೆ ಬೆರಳೆಣಿಕೆಯ ಸಿನಿಮಾಗಳು ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗಿವೆ. ಆದರೆ ಯಾವುದೂ ತೆಲುಗಿನ ಬಾಹುಬಲಿ ಸಿನಿಮಾ ಬಜೆಟ್ ಮೀರಿಸಿಲ್ಲ. ಈ ದಾಖಲೆ ಮುರಿಯಲು 400-500 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣಕ್ಕೆ ಗಾನ ಶ್ರವಣ್ ಸ್ವಾಮೀಜಿ ಮುಂದಾಗಿದ್ದಾರೆ. ಜಿಎಸ್ಆರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣಗೊಳ್ಳಲಿದೆ. ಅದಿತಿ ಅವರು ಸಹ ನಿರ್ಮಾಪಕಿ ಆಗಿದ್ದಾರೆ.
ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಮೈಸೂರಿನಲ್ಲಿ 640 ಎಕರೆ ಜಮೀನು ಖರೀದಿಸಿ ಅಲ್ಲಿ ಸೆಟ್ ಹಾಕಿ ಸಿನಿಮಾ ಶೂಟ್ ಮಾಡುವ ಆಲೋಚನೆ ಶ್ರವಣ್ ಸ್ವಾಮೀಜಿ ಅವರದ್ದಾಗಿದೆ.
ಶ್ರವಣ್ ಸ್ವಾಮೀಜಿ ಕಳೆದ ವರ್ಷ ಕೇರಳದ ಭಗವತಿ ಅಮ್ಮ ದೇವಸ್ಥಾನಕ್ಕೆ 700 ಕೋಟಿ ರೂಪಾಯಿ ದೇಣಿಗೆ ನೀಡಿ ಗಮನ ಸೆಳೆದಿದ್ದರು. ಈಗ ಅವರು ಹೈ ಬಜೆಟ್ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದು ಸುದ್ದಿಗೆ ಕಾರಣವಾಗಿದೆ.
ಈ ಚಿತ್ರದ ನಿರ್ದೇಶನ, ತಾರಾಗಣದ ಬಗ್ಗೆ ಕುತೂಹಲ ಉಂಟಾಗಿದೆ.
Be the first to comment