ಅಗಸ್ಟ್ 20ಕ್ಕೆ ತೆರೆಗೆ ಬರುತ್ತಿದೆ “ಶಾರ್ದೂಲ” ಚಿತ್ರ

ಕೊರೋನ ಹಾವಾಳಿಯಿಂದ ತತ್ತರಿಸಿದ ಕನ್ನಡ ಚಿತ್ರರಂಗ ಶ್ರಾವಣ ಆರಂಭದ ವೇಳೆಗೆ ಸ್ವಲ್ಪ ಚುರುಕುಗೊಂಡಿದೆ. ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ಕೆಲವು ಚಿತ್ರಗಳು ತೆರೆ‌‌ ಕಾಣಲಿದೆ. ಆ ಪೈಕಿ ಹಾರಾರ್ ಸಸ್ಪೆನ್ಸ್ ಕಥೆ ಆಧಾರಿತ “ಶಾರ್ದೂಲ” ಚಿತ್ರವೂ ಒಂದು.‌ ಈ ಚಿತ್ರದ ಬಿಡುಗಡೆ ಬಗ್ಗೆ ಮಾತನಾಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.

ಇದೊಂದು ಉತ್ತಮ ಕಥಾಹಂದರ ಹೊಂದಿರುವ ಚಿತ್ರ. ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯವೂ ಸೂಪರ್… ಪ್ಯಾಂಡಮಿಕ್ ಸಮಯದಲ್ಲಿ ಜನರಿಗೆ ಉತ್ತಮ ಮನೋರಂಜನೆ ನೀಡಲು ಇದೇ ಇಪ್ಪತ್ತರಂದು “ಶಾರ್ದೂಲ” ಆಗಮಿಸುತ್ತಿದೆ. ನೀವೆಲ್ಲಾ ನೋಡಿ ಹರಸಿ ಎಂದರು ನಾಯಕ ಚೇತನ್ ಚಂದ್ರ.

ತುಂಬಾ ಹೆದರಿಕೆಯುಳ್ಳ ಹುಡುಗಿಯಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ದೀಕ್ಷ ಎನ್ನುವುದು ನನ್ನ ಪಾತ್ರದ ಹೆಸರು ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಂಡ ನಾಯಕಿ ಕೃತಿಕಾ ರವೀಂದ್ರ, ಉತ್ತಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಡಿರುವ “ರಾಬರ್ಟ್” ಖ್ಯಾತಿಯ ಐಶ್ವರ್ಯ ಪ್ರಸಾದ್, ಆ ಚಿತ್ರದ ಪಾತ್ರಕ್ಕೂ, ಈ ಚಿತ್ರದ ಪಾತ್ರಕ್ಕೂ ತುಂಬಾ ವ್ಯತ್ಯಾಸವಿದೆ. ಕೃತಿಕಾ ಅವರದು ಹೆದರಿಕೊಳ್ಳುವ ಪಾತ್ರವಾದರೆ, ನನ್ನದು ಬೋಲ್ಡ್ ಹುಡುಗಿ ಪಾತ್ರವೆಂದರು.

ಮತ್ತೊಬ್ಬ ಪ್ರಮುಖ ಪಾತ್ರಧಾರಿ ರವಿತೇಜ ತಮ್ಮ ಪಾತ್ರ ಪರಿಚಯ ಮಾಡಿಕೊಳುತ್ತಾ, ಚಿತ್ರೀಕರಣದಲ್ಲಿ ನಡೆದ ಕೆಲವು ಸ್ವಾರಸ್ಯಕರ ಘಟನೆಗಳನ್ನು ಹಂಚಿಕೊಂಡರು.ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇಂತಹ ಸಮಯದಲ್ಲಿ ಪ್ರೇಕ್ಷಕರೆ ನಮ್ಮ ಕೈ ಹಿಡಿಯಬೇಕು. ಕೊರೋನ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಬಿಡುಗಡೆ ಮಾಡುತ್ತಿದ್ದೇವೆ. ಯಾವುದೇ ಭಯವಿಲ್ಲದೇ ಚಿತ್ರಮಂದಿರಕ್ಕೆ ಬಂದು ನಮ್ಮ ಚಿತ್ರವನ್ನು ನೋಡಿ ಗೆಲ್ಲಿಸಿ ಎನ್ನುತ್ತಾರೆ ನಿರ್ಮಾಪಕದ್ವಯರಾದ ರೋಹಿತ್ ಹಾಗೂ ಕಲ್ಯಾಣ್.

ನನ್ನ ಪಾತ್ರದ ಬಗ್ಗೆ ಎಲ್ಲೂ ರಿವಿಲ್ ಮಾಡಿಲ್ಲ..ಸಿನಿಮಾ ಬಿಡುಗಡೆ ದಿನವೇ ಎಲ್ಲರಿಗೂ ನನ್ನ ಪಾತ್ರದ ಬಗ್ಗೆ ತಿಳಿಯತ್ತದೆ ಎಂದರು ನಟ ನವೀನ್ ಕುಮಾರ್.ಸಂಗೀತ ನಿರ್ದೇಶಕ ಸತೀಶ್ ಬಾಬು ಚಿತ್ರದ ಸಂಗೀತದ ಬಗ್ಗೆ ಮಾತನಾಡಿದರು.ನಿರ್ಮಾಪಕರಾದ ಭಾ.ಮ.ಹರೀಶ್, ಭಾ.ಮ.ಗಿರೀಶ್, ರಿವೈಂಡ್ ಖ್ಯಾತಿಯ ತೇಜ್ ಮೊದಲದವರು ಪತ್ರಿಕಾಗೋಷ್ಠಿಗೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಭೈರವ ಸಿನಿಮಾಸ್ ಮತ್ತು ಸಿ ವಿ ಆರ್ ಸಿನಿಮಾಸ್ ಲಾಂಛನದಲ್ಲಿ ರೋಹಿತ್ ಶಾಂತಪ್ಪ ಹಾಗೂ ಕಲ್ಯಾಣ್ ಸಿ ನಿರ್ಮಿಸಿರುವ ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದಾರೆ.ಈ ಹಿಂದೆ ನಮ‌್ ಏರಿಯಲ್ಲೊಂದು‌ ದಿನ, ತುಘಲಕ್ ಹಾಗೂ ಹುಲಿರಾಯ ಚಿತ್ರಗಳನ್ನು ಅರವಿಂದ್ ಕೌಶಿಕ್ ನಿರ್ದೇಶಿಸಿದ್ದರು.
ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ದೆವ್ವ ಇರಬಹುದ್ದಾ? ಎಂಬ ಅಡಿಬರಹವಿದೆ.

ವೈ.ಜಿ.ಆರ್ ಮನು ಛಾಯಾಗ್ರಹಣ, ಸತೀಶ್ ಬಾಬು ಸಂಗೀತ ನಿರ್ದೇಶನ, ಶಿವರಾಜ್ ಮೇಹು ಸಂಕಲನ ಹಾಗು ಮಾಸ್ ಮಾದ, ವೈಲೆಂಟ್ ವೇಲು ಮತ್ತು ಅಲ್ಟಿಮೇಟ್ ಶಿವು ಅವರ‌ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.. ಪಿ.ಯು.ಸಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಚೇತನ್ ಚಂದ್ರ, ನಿರ್ದೇಶಕ, ನಟ ರವಿತೇಜ, ಕೃತಿಕ ರವೀಂದ್ರ, ಐಶ್ವರ್ಯ ಪ್ರಸಾದ್, ಕಲ್ಯಾಣ್, ಹೃಷಿಕೇಶ್, ಮಹೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!