‘ಐ ಲವ್ ಯೂ ರಚ್ಚು’ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ವೇಳೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಸಾಹಸ ಕಲಾವಿದ ವಿವೇಕ್ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಬಿಡದಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿದ್ದಾರೆ.
ಈ ಸಂಬಂಧ ನಿರ್ದೇಶಕ ಶಂಕರ್ ರಾಜ್, ಸಾಹಸ ಕಲಾವಿದ ವಿನೋದ್, ಕ್ರೇನ್ ಚಾಲಕ ಮುನಿಯಪ್ಪ, ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್, ನಿರ್ಮಾಪಕ ಗುರು ದೇಶಪಾಂಡೆ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಘಟನೆ ಸಂಬಂಧ ನಿರ್ದೇಶಕ ಶಂಕರ್, ಸಾಹಸ ಕಲಾವಿದ ವಿನೋದ್, ಕ್ರೇನ್ ಚಾಲಕ ಮುನಿಯಪ್ಪ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ನಿರ್ಮಾಪಕ ಗುರುದೇಶಪಾಂಡೆ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಫರ್ನಾಂಡಿಸ್ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಲಭಿಸಿದ್ದು ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.
ಲವ್ ಯು ರಚ್ಚು ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣವನ್ನು ಬಿಡದಿಯ ಜೋಗರಪಾಳ್ಯ ಗ್ರಾಮದಲ್ಲಿ ಆ.9ರಂದು ನಡೆಸುತ್ತಿದ್ದ ವೇಳೆ ವಿದ್ಯುತ್ ತಂತಿಗೆ ರೋಪ್ ತಗುಲಿದ ಪರಿಣಾಮ ಫೈಟರ್ ವಿವೇಕ್ ಮೃತ ಪಟ್ಟಿರುವ ದುರ್ಘಟನೆ ಸಂಭವಿಸಿದೆ.
ಈ ವೇಳೆ ರಂಜಿತ್ ಎನ್ನುವ ವ್ಯಕ್ತಿಗೂ ಗಂಭೀರ ಗಾಯಗಳಾಗಿದ್ದು ಅವರನ್ನು ಆರ್ ಆರ್ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿವೇಕ್ ಮೃತದೇಹವನ್ನು ಆರ್ ಆರ್ ನಗರದ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇಂದು ಮರಣೋತ್ತರ ನಡೆಯಲಿದೆ. ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಾಗುವುದು ಎನ್ನುವ ಮಾಹಿತಿ ಲಭಿಸಿದೆ.
___________

Be the first to comment